ನ್ಯೂಸ್

ಬೆಳ್ಳಂಬೆಳಗ್ಗೆ ಪತ್ನಿ ಕಣ್ಣೆದುರಲ್ಲೇ ಗಂಡ-ಅತ್ತೆಯ ಬರ್ಬರ ಹತ್ಯೆ!

arunakunigal

ಶಿವಮೊಗ್ಗ: ಸಾಗರ ತಾಲೂಕಿನಲ್ಲಿ ವೃದ್ಧ ಜೋಡಿ ಬರ್ಬರವಾಗಿ ಕೊಲೆಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು ಡಬಲ್​ ಮರ್ಡರ್​ ಆಗಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ಭಾನುವಾರ ಬೆಳ್ಳಂಬೆಳಗ್ಗೆ ಹಳೇ ಇಕ್ಕೇರಿ ಗ್ರಾಮದ ಕಸಕಸೆಕೊಡ್ಲುವಿನ ಗ್ರಾಮದಲ್ಲಿ ತಾಯಿ ಮತ್ತು ಮಗನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಬಂಗಾರಮ್ಮ (62) ಮತ್ತು ಇವರ ಪುತ್ರ ಪ್ರವೀಣ್ (32) ಕೊಲೆಯಾದ ದುರ್ದೈವಿಗಳು.

ತಾಯಿ-ಮಗನನ್ನು ದುಷ್ಕರ್ಮಿಗಳು ಚಾಕುವಿನಿಂದ ಮನಸೋಇಚ್ಛೆ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಪ್ರವೀಣ್​ ಪತ್ನಿ ರೋಹಿಣಿ ಹಾಗೂ 10 ತಿಂಗಳ ಮಗುವಿನ ಮುಂದೆ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದು, ಮನೆಯಲ್ಲಿದ್ದ ಹಣ ಮತ್ತು ಮೊಬೈಲ್ ದೋಚಿಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.

ಗ್ರಾಮದಲ್ಲಿ ಸಣ್ಣಪುಟ್ಟ ಜಮೀನು ಹೊಂದಿರುವ ಇವರ ಕೊಲೆಗೆ ಬಲವಾದ ಕಾರಣವೇನು? ಎಂಬುದು ತನಿಖೆಯಲ್ಲಿ ಬಯಲಾಗಬೇಕಿದೆ. ಕೆಲ ದಿನಗಳ ಹಿಂದಷ್ಟೇ ಕರೂರಿನಲ್ಲಿ ನಡೆದ ವೃದ್ಧರಿಬ್ಬರ ಕೊಲೆ ರಹಸ್ಯ ಇನ್ನೂ ಬಯಲಾಗಿಲ್ಲ. ಇದೀಗ ಕಸಕಸೆಕೊಡ್ಲುವಿನ ತಾಯಿ-ಮಗನ ಕೊಲೆ ಮಲೆನಾಡಿಗರನ್ನ ಬೆಚ್ಚಿಬೀಳಿಸಿದೆ.

ಸ್ಥಳಕ್ಕೆ ಎಸ್.ಪಿ. ಶಾಂತರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.