ನ್ಯೂಸ್

ಸಮನ್ಸ್ ಜಾರಿ ಮಾಡಲು ಹೋದ ಪೊಲೀಸ್ ಮಾರ್ಗಮಧ್ಯೆ ಸಾವು!

ಹಾವೇರಿ: ಸಮನ್ಸ್ ಜಾರಿ ಮಾಡಲು ಹೋದ ಪೊಲೀಸ್ ಕಾನ್​ಸ್ಟೆಬಲ್ ಮಾರ್ಗಮಧ್ಯೆಯೇ ಸಾವಿಗೀಡಾದ ಪ್ರಸಂಗವೊಂದು ನಡೆದಿದೆ. ಹಾವೇರಿ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದ್ದು, ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿಗ್ಗಾಂವಿ ಪೊಲೀಸ್​ ಠಾಣೆಯಲ್ಲಿ ಕಾನ್​ಸ್ಟೆಬಲ್ ಆಗಿದ್ದ ಚನ್ನಪ್ಪ ಸಂಶೀ (56) ಸಾವಿಗೀಡಾದವರು. ಕರ್ತವ್ಯನಿರತರಾಗಿದ್ದ ಇವರು ಸಮನ್ಸ್ ಜಾರಿ ಮಾಡಲು ಹೋಗಿದ್ದರು. ಆದರೆ ಇವರು ಮಾರ್ಗಮಧ್ಯೆಯೇ ಸಾವಿಗೀಡಾಗಿದ್ದಾರೆ.

ಬೈಕ್​ನಲ್ಲಿ ಸಾಗುತ್ತಿದ್ದ ಇವರಿಗೆ ಶಿಗ್ಗಾಂವಿ ತಾಲೂಕಿನ ಹನಮರಹಳ್ಳಿ ಗ್ರಾಮದ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಗಂಭೀರ ಗಾಯಗೊಂಡ ಚನ್ನಪ್ಪ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಸ್ಥಳಕ್ಕೆ ಶಿಗ್ಗಾಂವಿ ಪಿಎಸ್ಐ ಸಂಪತ್​ ಹಾಗೂ ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.