ಬೆಂಗಳೂರು: ಸ್ವತಃ ಹೋಂ ಕ್ವಾರಂಟೈನ್ನಲ್ಲಿ ಇದ್ದುಕೊಂಡೇ ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರು ಕರೊನಾ ಸೋಂಕಿತ ಪೊಲೀಸ್ ಸಿಬ್ಬಂದಿಯ ಆರೋಗ್ಯವನ್ನು ವಿಡಿಯೋ ಕಾಲ್ ಮೂಲಕ ವಿಚಾರಿಸಿದರು.
ಪೊಲೀಸ್ ಆಯುಕ್ತರಾಗಿ ಕಮಲ್ ಪಂತ್ ಶನಿವಾರ ಅಧಿಕಾರ ಸ್ವೀಕರಿಸಿದ್ದರು. ಸಿಎಂ ಬಿ.ಎಸ್. ಯಡಿಯೂರಪ್ಪಗೆ ಭಾನುವಾರ ಕರೊನಾ ದೃಢಪಟ್ಟಿದ್ದು, ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದ ಹಿನ್ನೆಲೆಯಲ್ಲಿ ಆಯುಕ್ತರು ಕ್ವಾರಂಟೈನ್ಗೆ ಒಳಗಾಗಿದ್ದಾರೆ. ಈ ವೇಳೆ ಸೋಂಕು ತಗುಲಿ ಕೋವಿಡ್ ಆಸ್ಪತ್ರೆ ಸೇರಿರುವ ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ಅವರೊಂದಿಗೆ ಪೊಲೀಸರ ಜತೆ ಸೋಮವಾರ ವಿಡಿಯೋ ಕಾಲ್ನಲ್ಲಿ ಯೋಗಕ್ಷೇಮ ವಿಚಾರಿಸಿದರು. ಅಲ್ಲಿನ ವ್ಯವಸ್ಥೆ ಕುರಿತು ಮಾಹಿತಿ ಪಡೆದು ಸಿಬ್ಬಂದಿಗೆ ಆತ್ಮಸ್ಥೈರ್ಯ ತುಂಬಿದರು.
ಈ ಮೊದಲು ರಾಜ್ಯ ಗುಪ್ತದಳ ಎಡಿಜಿಪಿ ಆಗಿದ್ದ ಕಮಲ್ ಪಂತ್, ಪ್ರತಿದಿನ ಬೆಳಗ್ಗೆ ಸಿಎಂ ಅವರನ್ನು ಭೇಟಿ ಮಾಡಿ ರಾಜ್ಯದ ಕಾನೂನು ಸುವ್ಯವಸ್ಥೆ ಕುರಿತು ಮಾಹಿತಿ ನೀಡುತ್ತಿದ್ದರು. ಕಮಿಷನರ್ ಆದ ಮೇಲೂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದ್ದರು. ಸದ್ಯ ಕ್ವಾರಂಟೈನ್ಗೆ ಒಳಪಟ್ಟಿದ್ದರೂ ತಮ್ಮ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.