ನ್ಯೂಸ್

ಮಕ್ಕಳ ಅಪಹರಣ ಜಾಲ ಬೇಧಿಸಿದ ಪೊಲೀಸರು; ಐವರು ಆರೋಪಿಗಳ ಬಂಧನ, ಆರು ಮಕ್ಕಳ ರಕ್ಷಣೆ| Kidnapping racket

Kidnapping racket: ತೆಲಂಗಾಣದ ಚಂದಾನಗರ ಠಾಣೆ ಪೊಲೀಸರು ಹೈದರಾಬಾದ್, ಸೈಬರಾಬಾದ್ ಹಾಗೂ ಸಂಗರೆಡ್ಡಿ ಜಿಲ್ಲೆಯಲ್ಲಿ ಸುಮಾರು 5 ವರ್ಷಗಳಿಂದ ನಡೆಯುತ್ತಿದ್ದ ಮಕ್ಕಳ ಅಪಹರಣ ಜಾಲವನ್ನ ಬೇಧಿಸಿದ್ದಾರೆ. ಐವರು ಆರೋಪಿಗಳನ್ನು ಬಂಧಿಸಿ, 5 ಲಕ್ಷ ರೂಪಾಯಿಯನ್ನು ವಶಪಡಿಸಿಕೊಂಡಿದ್ದಾರೆ. ಆರು ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ ಎಂದು ಮಂಗಳವಾರ(ಸೆ. 02) ವರದಿಯಾಗಿದೆ.

ಆಗಸ್ಟ್ 26 ರಂದು ಲಿಂಗಂಪಲ್ಲಿಯಲ್ಲಿರುವ ಪೋಚಮ್ಮ ದೇವಸ್ಥಾನದಲ್ಲಿರುವ ತಮ್ಮ ಗುಡಿಸಲಿನಿಂದ ತನ್ನ ಐದು ವರ್ಷದ ಮಗ ಅಖಿಲ್ ನಾಪತ್ತೆಯಾಗಿದ್ದಾನೆ ಎಂದು ಮಹಿಳೆಯೊಬ್ಬರು ನೀಡಿದ ದೂರನ್ನು ಕೈಗೆತ್ತಿಕೊಂಡು ವಿಶೇಷ ತನಿಖಾ ತಂಡದಿಂದ ಅಪಹರಣ ಜಾಲವನ್ನು ಬೇಧಿಸಿದ್ದಾರೆ.

ಜಾಲದ ಪ್ರಮುಖ ಆರೋಪಿ ಚಿಲುಕುರಿ ರಾಜು, ಪತಂಚೆರುವಿನ ಆಯುರ್ವೇದ ಚಿಕಿತ್ಸಕ ಬಾಲರಾಜು, ಸಂಗಾರೆಡ್ಡಿಯ ತರಕಾರಿ ಮಾರಾಟಗಾರ ಮೊಹಮ್ಮದ್ ಆಸಿಫ್, ಸಿದ್ದಿಪೇಟೆಯಲ್ಲಿ ನರ್ಸಿಂಗ್ ಕ್ಲಿನಿಕ್ ನಡೆಸುತ್ತಿರುವ ರಿಜ್ವಾನಾ, ಮೂಸಾಪೇಟೆಯ ಮೇಸ್ತ್ರಿ ನರಸಿಂಹ ರೆಡ್ಡಿ ಬಂಧಿತ ಆರೋಪಿಗಳು ಎನ್ನಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಆರೋಪಿ ರಾಜು ಹೆಚ್ಚಾಗಿ ರೈಲ್ವೆ ನಿಲ್ದಾಣಗಳು ಮತ್ತು ಪ್ರತ್ಯೇಕ ಪ್ರದೇಶಗಳಲ್ಲಿದ್ದು, ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಗುರಿಯಾಗಿಸಿಕೊಂಡಿದ್ದನು ಎನ್ನಲಾಗಿದೆ. . ದಿನಗಳ ಕಾಲ ಅವರ ಚಲನವಲನಗಳನ್ನು ಗಮನಿಸಿ ನಂತರ ಅವರನ್ನು ಅಪಹರಿಸಿ, ತನ್ನ ಸಹಚರರಾದ ಆಸಿಫ್ ಮತ್ತು ರಿಜ್ವಾನಾ ಸಹಾಯದಿಂದ ಮಕ್ಕಳಿಲ್ಲದ ದಂಪತಿಗಳಿಗೆ ಮಾರಾಟ ಮಾಡುತ್ತಿದ್ದನು ಎಂದು ಹೇಳಿದ್ದಾರೆ.

ನಾಲ್ಕು ವರ್ಷಗಳ ಹಿಂದೆ, ರಾಜು ಕಾಚೆಗುಡ ರೈಲ್ವೆ ನಿಲ್ದಾಣದಿಂದ ಹೆಣ್ಣು ಮಗುವನ್ನು ಅಪಹರಿಸಿ 42,000 ರೂ.ಗೆ ಮಾರಾಟ ಮಾಡಿದ್ದನು. ಪತಂಚೇರುವಿನ ದಂಪತಿಗಳು ಕೇವಲ ಒಂದು ಮತ್ತು ಮೂರು ದಿನಗಳ ಎರಡು ನವಜಾತ ಶಿಶುಗಳನ್ನು ಆಸಿಫ್ ಮೂಲಕ ಮಕ್ಕಳಿಲ್ಲದ ದಂಪತಿಗೆ ಮಾರಾಟ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)