ಭುವನೇಶ್ವರ್: ಮಹಿಳೆಯ ಜೊತೆ ಅನುಚಿತವಾಗಿ ವರ್ತಿಸಿದ ಸಹಾಯಕ ಸಬ್ ಇನ್ಸ್ಪೆಕ್ಟರ್ನನ್ನು ಗ್ರಾಮಸ್ಥರು ಅಟ್ಟಾಡಿಸಿ ಥಳಿಸಿರುವ ಘಟನೆ ಒಡಿಶಾದ ಸೋನೆಪುರ್ ಜಿಲ್ಲೆಯ ತಿಲೈಮಾಲ್ ಗ್ರಾಮದಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಥಳಿತಕ್ಕೆ ಒಳಗಾದ ಎಎಸ್ಐ ಅನ್ನು ಗೌರಾಹರಿ ಮೆಹೆರ್ ಎಂದು ಗುರುತಿಸಲಾಗಿದೆ. ಇವರು ಸಬಾಲಯ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮೂಲಗಳ ಪ್ರಕಾರ ರತ್ನಾಕರ್ ಪ್ರಧಾನ್ ಮತ್ತು ಆತನ ಸಹೋದರ ಸುಬಾಸ್ ಪ್ರಧಾನ್ ನಡುವೆ ಗಲಾಟೆಯಾದ ಬಳಿಕ ಇಬ್ಬರು ಸುಬಾಲಯಾ ಪೊಲೀಸ್ ಠಾಣೆಯ ಮೆಟ್ಟಿಲೇರಿದರು. ಸುಬಾಸ್ ದೂರನ್ನು ಸ್ವೀಕರಿಸಿದ ಪೊಲೀಸರು ರತ್ನಾಕರ್ ದೂರನ್ನು ನಿರಾಕರಿಸಿದರು. ಬಳಿಕ ಸುಬಾಸ್ ದೂರಿನ ಮೇರೆಗೆ ಎಎಸ್ಐ ಮೆಹೆರ್ ವಿಚಾರಣೆಗೆಂದು ಸಿವಿಲ್ ಡ್ರೆಸ್ನಲ್ಲಿ ಗ್ರಾಮಕ್ಕೆ ಬಂದರು. ಈ ವೇಳೆ ರತ್ನಾಕರ್ ಪತ್ನಿಯ ಜತೆ ಅಸಭ್ಯವಾಗಿ ವರ್ತಿಸಿದರು ಎಂಬ ಆರೋಪ ಕೇಳಿಬಂದಿದೆ.
ಎಎಸ್ಐ ವಿರುದ್ಧ ಕೆರಳಿದ ಗ್ರಾಮಸ್ಥರು ಅವರನ್ನು ಅಟ್ಟಾಡಿಸಿಕೊಂಡು ಥಳಿಸಿದ್ದಾರೆ. ಅಲ್ಲದೆ, ರತ್ನಾಕರ್, ಎಎಸ್ಐ ಮೆಹೆರ್ ವಿರುದ್ಧ ಸೋನೆಪುರ್ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಬಿರಾಮಹರಾಜ್ಪುರ್ ಉಪ ವಿಭಾಗೀಯ ಪೊಲೀಸ್ ಅಧಿಕಾರಿಗೆ ದೂರು ಸಹ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ರತ್ನಾಕರ್, ಮರ ಕಡಿಯುವ ವಿಚಾರಕ್ಕೆ ನನ್ನ ಮತ್ತು ಸಹೋದರನ ನಡುವೆ ಜಗಳ ಆರಂಭವಾಯಿತು. ಬಳಿಕ ಸುಬಾಸ್ ನನ್ನ ವಿರುದ್ಧ ದೂರು ದಾಖಲಿಸಿದ. ಆದರೆ, ನನ್ನ ದೂರುನ್ನು ನಿರಾಕರಿಸಿದರು. ಎಎಸ್ಐ ವಿಚಾರಣೆಗೆಂದು ಗ್ರಾಮಕ್ಕೆ ಬಂದಾಗ ನಾನು ಇಲ್ಲದ ಸಮಯದಲ್ಲಿ ನನ್ನ ಪತ್ನಿಯ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಎಎಸ್ಐ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಗ್ರಾಮದ 7 ಮಂದಿಯ ವಿರುದ್ಧ ಸಬಾಲಯ ಠಾಣಾ ಪೊಲೀಸರು ದೂರು ದಾಖಲಿಸಿದ್ದಾರೆ. (ಏಜೆನ್ಸೀಸ್)