ದಾವಣಗೆರೆ: ಹಿಂದುಗಳ ಅಂಗಡಿಗಳಲ್ಲಿ ಬಟ್ಟೆ ಖರೀದಿಸಬಾರದು ಎಂಬುದಾಗಿ ಮುಸ್ಲಿಂ ಮಹಿಳೆಯರಿಗೆ ತಾಕೀತು ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಸೈಯದ್ ಮಹಮದ್ (24) ಮತ್ತು ಫಯಾಜ್ ಅಹಮದ್ (32) ಬಂಧಿತರು. ಈ ವಿಷಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರು ಖಚಿತಪಡಿಸಿದ್ದಾರೆ.
ಇತ್ತೀಚೆಗೆ ಮುಸ್ಲಿಂ ಮಹಿಳೆಯರು ಅಕ್ಕಮಹಾದೇವಿ ರಸ್ತೆಯಲ್ಲಿರುವ ಜವಳಿ ಅಂಗಡಿಯೊಂದಕ್ಕೆ ಹೋಗಿ ಬಟ್ಟೆ ತೆಗೆದುಕೊಂಡು ಹೊರಬರುವಾಗ ಈ ಇಬ್ಬರೂ ಯುವಕರು ಇನ್ನು ಕೆಲವರ ಜತೆಗೂಡಿ ಆ ಮಹಿಳೆಯರನ್ನು ತಡೆದು ನಿಂದಿಸಿದ್ದರು.
‘ನಮ್ಮವರದೇ ಅಂಗಡಿ ಇರುವಾಗ ಇತರ ಧರ್ಮದವರ ಅಂಗಡಿಗೇಕೆ ಹೋಗಿ ಖರೀದಿಸುತ್ತೀರಿ’’ ಎಂದು ಆ ಗುಂಪಿನಲ್ಲಿದ್ದವರು ಮಹಿಳೆಯರನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲೇ ಇದ್ದ ಕೆಲವರು ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದರು. ಅದು ರಾಜ್ಯಾದ್ಯಂತ ವೈರಲ್ ಆಗಿತ್ತು.
ಮುಸ್ಲಿಂ ಯುವಕರ ಈ ರೀತಿಯ ನಡವಳಿಕೆಗೆ ಭಾರಿ ಆಕ್ಷೇಪ ವ್ಯಕ್ತವಾಗಿತ್ತು. ಹೊನ್ನಾಳಿ ಬಿಜೆಪಿ ಶಾಸಕ ರೇಣುಕಾಚಾರ್ಯ, ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಅನೇಕರು ಇದನ್ನು ಖಂಡಿಸಿದ್ದರಲ್ಲದೆ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.