ನ್ಯೂಸ್

56 ವರ್ಷದ ವ್ಯಕ್ತಿಗೆ 16 ವರ್ಷದ ಬಾಲಕಿ ಜತೆ ಮದುವೆ! ಮದುವೆಯ ಹಿಂದಿತ್ತು ಬಲವಾದ ಕಾರಣ

ಹೈದರಾಬಾದ್​: ಅಪ್ರಾಪ್ತ ಬಾಲಕಿಯೊಂದಿಗೆ 56ವ ವರ್ಷದ ವ್ಯಕ್ತಿಯನ್ನು ಮದುವೆ ಮಾಡಿಸಿರುವ ಘಟನೆ ಹೈದರಾಬಾದ್​ನ ಫಲಕ್ನುಮಾ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದೀಗ ಪೊಲೀಸರು ಮದುವೆಗೆ ಕಾರಣರಾದ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

16 ವರ್ಷದ ಬಾಲಕಿಗೆ 56 ವರ್ಷದ ಅಬ್ದುಲ್ ಲತೀಫ್ ಪರಂಬನ್ ಹೆಸರಿನ ವ್ಯಕ್ತಿಯೊಂದಿಗೆ ಮದುವೆ ಮಾಡಲಾಗಿದೆ. ಬಾಲಕಿಯ ಮನೆಯಲ್ಲಿ ಸಾಲದ ಹೊರೆ ಹೆಚ್ಚಿದ್ದ ಹಿನ್ನೆಲೆಯಲ್ಲಿ ಈ ಮದುವೆ ಮಾಡಿಸಲಾಗಿದೆ. ಬಾಲಕಿಯ ಕುಟುಂಬಕ್ಕೆ ಅಬ್ದುಲ್​ ಸಾಕಷ್ಟು ಹಣ ನೀಡಿದ್ದಾನೆ ಎನ್ನಲಾಗಿದೆ. ಬಾಲಕಿಯನ್ನು ಲಾಡ್ಜ್​ ಒಂದರಲ್ಲಿ ಕೂಡಿ ಹಾಕಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಹೂರ್ ಉನ್ನಿಸ್ಸಾ (ಬಾಲಕಿಯ ಆಂಟಿ), ಆಕೆಯ ಗಂಡ ಮಿರ್ ಫರ್ಹತುಲ್ಲಾ, ಮಗ ಮಿರ್ ರಹಮತುಲ್ಲಾ ಮತ್ತು ಮೊಹಮ್ಮದ್ ಬಡಿಯುದ್ದೀನ್ ಕ್ವಾಡ್ರಿ (ಖಾಜಿ) ಸೇರಿ ಒಟ್ಟು ಏಳು ಆರೋಪಿಗಳನ್ನು ಬಂಧಿಸಲಾಗಿದೆ. ಅದಾಗ್ಯೂ ಮುಖ್ಯ ಆರೋಪಿ ಅಬ್ದುಲ್​ ಪರಾರಿಯಾಗಿರುವುದಾಗಿ ತಿಳಿಸಲಾಗಿದೆ. ಇದೀಗ ಅಬ್ದುಲ್​ಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಹೇಳಲಾಗಿದೆ. (ಏಜೆನ್ಸೀಸ್​)