ನ್ಯೂಸ್

ಕಳ್ಳತನಕ್ಕೆ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದ ಗ್ಯಾಂಗ್ ಕಡೆಗೂ​ ಅರೆಸ್ಟ್; ಕಳ್ಳಿಯರು ಕಂಬಿ ಹಿಂದೆ, ಮಾಲು ವಶಕ್ಕೆ | Women Gang

ಚಿಕ್ಕಬಳ್ಳಾಪುರ: ಕಳೆದ ಕೆಲವು ತಿಂಗಳುಗಳಿಂದ ಕಳ್ಳಿಯರ ಗ್ಯಾಂಗ್ (Women Gang)​ ಬಂಧನಕ್ಕೆ ಬಲೆ ಬೀಸಿದ್ದ ಪೊಲೀಸರಿಗೆ ಚಳ್ಳೆ ಹಣ್ಣು ತಿನಿಸುತ್ತಿದ್ದ ಮಹಿಳೆಯರನ್ನು ಬಂಧಿಸುವಲ್ಲಿ ಕಡೆಗೂ ಖಾಕಿ ಪಡೆ ಯಶಸ್ವಿಯಾಗಿದೆ.

ಮಹಿಳಾ ಕಳ್ಳಿಯರನ್ನು ಬಂಧಿಸಿದ ಪೊಲೀಸರು, ಅವರು ಕದ್ದ ಮಾಲುಗಳನ್ನು ವಶಕ್ಕೆ ಪಡೆದಿದ್ದಾರೆ. ಐಷಾರಾಮಿ ಜೀವನ ಮಾಡುವ ಆಸೆಯಿಂದ ಕಳ್ಳತನದ ಹಿಂದೆ ಬಿದ್ದ ಈ ಕಳ್ಳಿಯರ ಗ್ಯಾಂಗ್, ತಮ್ಮ ಕೈಚಳಕ ತೋರಲು ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದರು. ಗೌರಿಬಿದನೂರು ನಗರದ ಕೆಎಸ್ಆರ್​ಟಿಸಿ ಬಸ್ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಮತ್ತು ಇತರೆ ಸಾಕ್ಷ್ಯಗಳನ್ನು ಸಂಗ್ರಹಿಸಿ, ಪೊಲೀಸರು ಖದೀಮರ ಗುರುತು ಪತ್ತೆಹಚ್ಚಿದ್ದಾರೆ.

ಸರಗಳ್ಳತನ, ಪಿಕ್ ಪ್ಯಾಕೇಟ್

ಸೇಡಂನ ರೇಖಾ ಬಾಯಿ ಕೋಂ ಲೇಟ್ ಶೇಖರ್ 58 ವರ್ಷ, ರೋಜಾ ಕೋಂ ಶ್ರೀನಾಥ್ 27 ವರ್ಷ, ಕರೀನಾ ಕೋಂ ಧಣ್ಣನ್ ಪಾಟೀಲ್ 25 ವರ್ಷ ಎಂದು ಗುರುತಿಸಲಾಗಿದೆ. ತುಮಕೂರು, ಹೊಳೆನರಸೀಪುರ, ಹಲಸೂರು, ರಾಮನಗರ ವ್ಯಾಪ್ತಿಯಲ್ಲೂ ಕಳ್ಳಿಯರ ಕೈಚಳಕ ನಡೆದಿದೆ. ಸರಣಿ ಸರಗಳ್ಳತನ ಮಾಡಿರುವ ಆರೋಪಿಗಳು, ಸರಗಳ್ಳತನ, ಪಿಕ್ ಪ್ಯಾಕೇಟ್ ಮಾಡುವುದು, ಬಸ್ಸು ನಿಲ್ದಾಣದಲ್ಲಿ, ಜನನಿಬಿಡ ಪ್ರದೇಶಗಳಲ್ಲಿ, ನೂಕುನುಗ್ಗಲು ಜಾಗದಲ್ಲಿ ಕಳ್ಳತನ ಮಾಡುವುದೇ ಪ್ರವೃತ್ತಿ ಮಾಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಊರಿನಿಂದ ಊರಿಗೆ ಹೋಗಿ ನಿರಂತರ ಕಳ್ಳತನದಲ್ಲಿ ತೊಡಗಿದ್ದ ಈ ಮಹಿಳೆಯರು, ಶೋಕಿ ಜೀವನಕ್ಕಾಗಿ ಕಳ್ಳತನ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.