Cone snail | ಅತ್ಯಂತ ವಿಷಕಾರಿ ಪ್ರಾಣಿಗಳು ಯಾವುವು ಎಂದಾಗ ನಮಗೆ ಕಿಂಗ್ ಕೋಬ್ರಾ ಮತ್ತು ಬ್ಲ್ಯಾಕ್ ಮಾಂಬಾದಂತಹ ಹಾವುಗಳು ನೆನಪಿಗೆ ಬರುತ್ತವೆ. ನಾವು ಅತ್ಯಂತ ವಿಷಕಾರಿ ಪ್ರಾಣಿಗಳ ಬಗ್ಗೆ ಯೋಚಿಸಿದಾಗ ನಾಗರಹಾವು ನಮ್ಮ ಕಣ್ಮುಂದೆ ಬರುತ್ತೆ. ನಾಗರಹಾವು ಕಚ್ಚಿದಾಗ ಸಕಾಲದಲ್ಲಿ ವಿಷವಿರೋಧಿ ಔಷಧಿಯನ್ನು ಪಡೆಯದಿದ್ದರೆ ನೀವು ಕೆಲವೇ ನಿಮಿಷಗಳಲ್ಲಿ ಸಾಯಬಹುದು.
ಆದರೆ ಇವೆಲ್ಲವುಗಳಿಗಿಂತಲೂ ಹೆಚ್ಚು ಮಾರಕ ವಿಷವನ್ನು ಹೊಂದಿರುವ ಇನ್ನೊಂದು ಜೀವಿ ಇದೆ. ಆದರೆ ಅದು ಹಾವು ಅಲ್ಲ ಬದಲಾಗಿ ಸಮುದ್ರ ಬಸವನಹುಳು (ಕೋನಸ್ ಜಿಯೋಗ್ರಾಫಸ್). ಇದರ ವಿಷವು ಅನೇಕ ಹಾವುಗಳ ವಿಷಕ್ಕಿಂತ ಹಲವು ಪಟ್ಟು ಹೆಚ್ಚು ಮಾರಕವಾಗಿದೆ. ಇದಲ್ಲದೆ ಅದರ ವಿಷಕ್ಕೆ ಸರಿಸಾಟಿಯಾದ ವಿಷ ಮತ್ತೊಂದಿಲ್ಲ ಎನ್ನಲಾಗಿದೆ.
ಇಂಡೋ-ಪೆಸಿಫಿಕ್‌ನಲ್ಲಿ ಕಂಡುಬರುವ ಈ ಬಸವನ ಹುಳುವಿನ ವಿಷವು ಹಾವಿನ ವಿಷಕ್ಕಿಂತ ಹೆಚ್ಚು ವೇಗವಾಗಿ ಕೆಲಸ ಮಾಡುತ್ತದೆ. ಹಾವುಗಳು ತಮ್ಮ ಹಲ್ಲುಗಳಿಂದ ವಿಷವನ್ನು ಹೊರಹಾಕುತ್ತವೆ. ಆದರೆ ಈ ಬಸವನ ಹುಳು ಸೂಜಿಯಂತಹ ಕುಟುಕಿನಿಂದ ದಾಳಿ ಮಾಡುತ್ತದೆ. ಈ ವಿಷವು ನರಮಂಡಲದ ಮೇಲೆ ನೇರವಾಗಿ ದಾಳಿ ಮಾಡಿ ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ. ಕೆಲವು ಅತ್ಯಂತ ವಿಷಕಾರಿ ಹಾವುಗಳು ಕಚ್ಚಿದರೆ ಆ ವ್ಯಕ್ತಿ ಕೆಲವು ಗಂಟೆಗಳಲ್ಲಿ ಸಾವನ್ನಪ್ಪುತ್ತಾನೆ. ಆದರೆ ಈ ಬಸವನ ಹುಳು ಕಚ್ಚಿದರೆ ಕೇವಲ ನಿಮಿಷಗಳಲ್ಲೇ ವ್ಯಕ್ತಿ ಸಾವನ್ನಪ್ಪುತ್ತಾನೆ.
ಇಲ್ಲಿಯವರೆಗೆ ಈ ಬಸವನಹುಳುವಿನ ವಿಷದಿಂದಾಗಿ 30ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಆಳ ಸಮುದ್ರದಲ್ಲಿನ ಡೈವರ್‌ಗಳು ಅಜಾಗರೂಕತೆಯಿಂದ ಅದರ ಬಳಿ ಹೋದಾಗ, ಇದರ ಕಡಿತಕ್ಕೆ ಒಳಗಾಗಿ ಸಾವಿಗೀಡಾಗಿದ್ದಾರೆ. ಇದರ ವಿಷವು ಅನೇಕ ವಿಭಿನ್ನ ವಿಷಗಳಿಂದ ಮಿಶ್ರಣವಾಗಿದೆ. ಅದಕ್ಕಾಗಿಯೇ ವೈದ್ಯಕೀಯ ತಜ್ಞರು ಇದಕ್ಕೆ ಪರಿಹಾರವನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ.
ಇದನ್ನೂ ಓದಿ: ಬೇಸಿಗೆ ಬಿಸಿಲಿನಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸುವುದೇಗೆ? ಯಾವ ಮಾರ್ಗ ಅನುಸರಿಸಿದರೆ ಉತ್ತಮ; Eye Secure
ಇದರ ವಿಷವು ಮಾರಕವಾಗಿರಬಹುದು, ಆದರೆ ವಿಜ್ಞಾನಿಗಳು ಈ ವಿಷವು ಹೊಸ ರೀತಿಯ ಔಷಧಿಗಳನ್ನು, ವಿಶೇಷವಾಗಿ ಶಕ್ತಿಶಾಲಿ ನೋವು ನಿವಾರಕಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದ್ದಾರೆ. ಆದ್ದರಿಂದ ಇದು ವೈದ್ಯಕೀಯ ಸಂಶೋಧನೆ ನಡೆಸುವ ಜನರಿಗೆ ತುಂಬಾ ಆಸಕ್ತಿದಾಯಕ ಪ್ರಾಣಿಯಾಗಿದೆ.
ಈ ಕೋನ್ ಬಸವನ ಹುಳು ಉಷ್ಣವಲಯದ ಸಾಗರಗಳ ಆಳದಲ್ಲಿ, ಬಂಡೆಗಳು ಮತ್ತು ಹವಳದ ದಿಬ್ಬಗಳ ನಡುವೆ ವಾಸಿಸುತ್ತದೆ. ಇದು ಮೀನುಗಳನ್ನು ಬೇಟೆಯಾಡುತ್ತದೆ. ಸಾಗರವು ಆಳವಾಗಿರುವುದರಿಂದ ಮತ್ತು ಜನರು ಅದನ್ನು ಅಪರೂಪವಾಗಿ ನೋಡುವುದರಿಂದ, ಇದರ ಮಾರಕ ಸ್ವರೂಪವು ಅನೇಕರಿಗೆ ತಿಳಿದಿಲ್ಲ.
ಈ ಕೋನ್ ಬಸವನ ಹುಳು ದಾಳಿ ಮಾಡುವ ಮೊದಲು ಯಾವುದೇ ಎಚ್ಚರಿಕೆ ನೀಡುವುದಿಲ್ಲ. ಆದರೆ ಮನುಷ್ಯನನ್ನು ಕೊಲ್ಲಲು ಇದರ ಒಂದು ಹನಿ ವಿಷ ಸಾಕು. ಈ ಪುಟ್ಟ ಬಸವನ ಹುಳು, ವೇಗವಾಗಿ ಕಾರ್ಯನಿರ್ವಹಿಸಲಿದ್ದು, ಇದನ್ನು ವಿಶ್ವದ ಅತ್ಯಂತ ವಿಷಕಾರಿ ಪ್ರಾಣಿ ಎಂದು ಕರೆಯಲಾಗಿದೆ.