ಗಾಂಧಿನಗರ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದ ಬೆನ್ನಲ್ಲೆ ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ ತವರು ರಾಜ್ಯ ಗುಜರಾತ್ಗೆ ಭೇಟಿ ನೀಡಿದ್ದು ಭರ್ಜರಿ ರೋಡ್ ಶೋ ಕೈಗೊಂಡಿದ್ದಾರೆ.
ಪ್ರಧಾನಿ ಮೋದಿ ಅವರನ್ನು ಗುಜರಾತ್ನಲ್ಲಿ ಅದ್ಧೂರಿಯಾಗಿ ಬರಮಾಡಿಕೊಳ್ಳಲಾಗಿದೆ. ಎರಡು ದಿನಗಳ ಕಾಲ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಹಲವಾರು ಸರ್ಕಾರಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಇಂದು ಸಂಜೆ ಗುಜರಾತ್ ಪಂಚಾಯತ್ ಸಮ್ಮೇಳನವನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ.
ಇಂದು ಗಾಂಧಿನಗರಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಸ್ಥಳೀಯ ನಾಯಕರು ಆತ್ಮೀಯವಾಗಿ ಬರಮಾಡಿಕೊಂಡರು. ಅಲಂಕೃತಗೊಂಡಿರುವ ತೆರೆದ ಜೀಪ್ನಲ್ಲಿ ಸಾವಿರಾರು ಬೆಂಬಲಿಗರ ನಡುವೆ ಪ್ರಧಾನಿ ಮೋದಿ ಭರ್ಜರಿ ರೋಡ್ ಶೋ ನಡೆಸಿದರು. ಗಾಂಧಿನಗರದ ವಿಮಾನ ನಿಲ್ದಾಣದಿಂದ ಆರಂಭವಾದ ರೋಡ್ ಶೋ ಗಾಂಧಿನಗರದ ಬಿಜೆಪಿ ಮುಖ್ಯ ಕಚೇರಿಯವರೆಗೂ ಸುಮಾರು 10 ಕಿ.ಮಿ.ವರೆಗೂ ಸಾಗಿದೆ.
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಸಿಆರ್ ಪಾಟೀಲ್ ಅವರು ವಾಹನದಲ್ಲಿ ಪ್ರಧಾನಿ ಮೋದಿಯವರಿಗೆ ಸಾಥ್ ನೀಡಿದರು.
ಗುಜರಾತ್ ಭೇಟಿಯ ಬಗ್ಗೆ ನಿನ್ನೆಯೇ ಟ್ವೀಟ್ ಮಾಡಿದ್ದ ಪ್ರಧಾನಿ ಮೋದಿ ನಾನಿಂದು ಗುಜರಾತ್ಗೆ ತೆರಳುತ್ತಿದ್ದೇನೆ. ಸಂಜೆ ನಾಲ್ಕು ಗಂಟೆಗೆ ಪಂಚಾಯತ್ ಮಹಾಸಮ್ಮೇಳವನ್ನು ಉದ್ದೇಶಿಸಿ ಮಾತನಾಡಲಿದ್ದೇನೆ ಎಂದು ಹೇಳಿದ್ದಾರೆ.
ನಾಳೆ ಪ್ರಧಾನಮಂತ್ರಿ ಅವರು ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ (ಆರ್‌ಆರ್‌ಯು) ಕಟ್ಟಡವನ್ನು ಬೆಳಗ್ಗೆ 11 ಗಂಟೆಗೆ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಅವರು ಆರ್ಆರ್ಯುನ ಮೊದಲ ಘಟಿಕೋತ್ಸವದ ಮುಖ್ಯ ಅತಿಥಿಯಾಗಿ ಭಾಷಣ ಮಾಡಲಿದ್ದಾರೆ. ಮಾರ್ಚ್ 12 ರಂದು ಸಂಜೆ 6:30 ರ ಸುಮಾರಿಗೆ ಅವರು 11 ನೇ ಖೇಲ್ ಮಹಾಕುಂಭವನ್ನು ಉದ್ಘಾಟಿಸಲಿದ್ದಾರೆ ಮತ್ತು ಈ ಸಂದರ್ಭದಲ್ಲಿ ಭಾಷಣ ಮಾಡಲಿದ್ದಾರೆ ಎಂದು ಅವರ ಕಚೇರಿಯ ಮಾಧ್ಯಮ ಪ್ರಕಟಣೆ ತಿಳಿಸಿದೆ.
ಉತ್ತರ ಪ್ರದೇಶದಲ್ಲಿ ಒಟ್ಟು ವಿಧಾನಾಸಭಾ ಸ್ಥಾನಗಳಲ್ಲಿ 255 ರಲ್ಲಿ ಜಯ ಸಾಧಿಸುವ ಮೂಲಕ ಬಿಜೆಪಿ ಭರ್ಜರಿ ಗೆಲವು ದಾಖಲಿಸಿದೆ. ಉಳಿದಂತೆ ಉತ್ತರಾಖಂಡ, ಗೋವಾ ಹಾಗೂ ಮಣಿಪುರದಲ್ಲೂ ಬಿಜೆಪಿ ಕಮಾಲ್ ಮಾಡಿದ್ದು, ಮುಂಬರುವ ಗುಜರಾತ್ ಮತ್ತು ಕರ್ನಾಟಕ ವಿಧಾನಸಭಾ ಚುನಾವಣೆಯ ಮೇಲೆ ಕೇಂದ್ರ ಸರ್ಕಾರ ಕಣ್ಣಿಟ್ಟಿದೆ. (ಏಜೆನ್ಸೀಸ್)