Bihar: ಪ್ರಧಾನಿ ನರೇಂದ್ರ ಮೋದಿ ಇಂದು ವರ್ಚುವಲ್ ಆಗಿ ಬಿಹಾರದ ಯುವಕರೊಂದಿಗೆ ಸಂವಾದ ನಡೆಸಲಿದ್ದು, ಈ ಸಂದರ್ಭದಲ್ಲಿ 62,000 ಕೋಟಿ ರೂ ಮೌಲ್ಯದ ಪ್ರಮುಖ ಯುವ ಕೇಂದ್ರಿತ ಉಪಕ್ರಮಗಳ ಸರಣಿಯನ್ನು ಅನಾವರಣಗೊಳಿಸಲಿದ್ದಾರೆ ಎಂದು ವರದಿಯಾಗಿದೆ.
PM-SETU (ಪ್ರಧಾನ ಮಂತ್ರಿ ಕೌಶಲ್ಯ ಮತ್ತು ಉದ್ಯೋಗಾವಕಾಶ ಪರಿವರ್ತನೆ ಮೂಲಕ ಉನ್ನತೀಕರಿಸಿದ ಐಟಿಐಗಳು) ಯೋಜನೆಯ ಅಡಿಯಲ್ಲಿ ಸುಮಾರು 60,000 ಕೋಟಿ ರೂ. ಹೂಡಿಕೆಯೊಂದಿಗೆ ಕೇಂದ್ರ ಅನುದಾನ ನೀಡಲಿದೆ. ಭಾರತದಾದ್ಯಂತ 1,000 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು (ಐಟಿಐಗಳು) 200 ಹಬ್‌ಗಳು ಮತ್ತು 800 ಸ್ಪೋಕ್‌ಗಳನ್ನು ಒಳಗೊಂಡಿರುವ ಹಬ್-ಅಂಡ್-ಸ್ಪೋಕ್ ಮಾದರಿಯನ್ನು ಬಳಸಿಕೊಂಡು ನವೀಕರಣ ಮಾಡುವ ಗುರಿ ಹೊಂದಲಾಗಿದೆ.
ಇದೇ ವೇಳೆ ಪ್ರಧಾನಿ ಮೋದಿ, ಬಿಹಾರದ ಮುಖ್ಯಮಂತ್ರಿ ನಿಶ್ಚಿತ ಸ್ವಯಂ ಸಹಾಯತ ಭಟ್ಟ ಯೋಜನೆಯನ್ನು ಉದ್ಘಾಟಿಸಲಿದ್ದಾರೆ. ಈ ಯೋಜನೆಯಡಿಯಲ್ಲಿ, ಬಿಹಾರದ ಐದು ಲಕ್ಷ ಪದವೀಧರರಿಗೆ ಶಿಕ್ಷಣದಿಂದ ಉದ್ಯೋಗಕ್ಕೆ ಬೆಂಬಲ ನೀಡಲು ಎರಡು ವರ್ಷಗಳವರೆಗೆ 1,000 ರೂ.ಗಳ ಮಾಸಿಕ ಭತ್ಯೆಯನ್ನು ನೀಡಲಾಗುವುದು. ವೃತ್ತಿಪರ ಮತ್ತು ಕೈಗಾರಿಕಾ ಆಧಾರಿತ ಶಿಕ್ಷಣವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಜನ್ ನಾಯಕ್ ಕರ್ಪೂರಿ ಠಾಕೂರ್ ಕೌಶಲ್ಯ ವಿಶ್ವವಿದ್ಯಾಲಯವನ್ನು ಉದ್ಘಾಟಿಸಲಿದ್ದಾರೆ. ರಾಜ್ಯದ ನಾಲ್ಕು ವಿಶ್ವವಿದ್ಯಾಲಯಗಳಲ್ಲಿ ಹೊಸ ಶೈಕ್ಷಣಿಕ ಮತ್ತು ಸಂಶೋಧನಾ ಸೌಲಭ್ಯಗಳಿಗೆ ಅಡಿಪಾಯ ಹಾಕಲಿದ್ದಾರೆ ಮತ್ತು ಬಿಹ್ತಾದಲ್ಲಿ ಎನ್ಐಟಿ ಪಾಟ್ನಾದ ಹೊಸ ಕ್ಯಾಂಪಸ್ ಅನ್ನು ಲೋಕಾರ್ಪಣೆ ಮಾಡಲಿದ್ದಾರೆ.
ರಾಷ್ಟ್ರವ್ಯಾಪಿ ಕೌಶಲ್ಯ ಅಭಿವೃದ್ಧಿ ಉಪಕ್ರಮದ ಭಾಗವಾಗಿ, 34 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನವೋದಯ ವಿದ್ಯಾಲಯಗಳು ಮತ್ತು ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ ಸ್ಥಾಪಿಸಲಾದ 1,200 ವೃತ್ತಿಪರ ಕೌಶಲ್ಯ ಪ್ರಯೋಗಾಲಯಗಳನ್ನು ಮೋದಿ ಉದ್ಘಾಟಿಸಲಿದ್ದಾರೆ.(ಏಜೆನ್ಸೀಸ್)