ನ್ಯೂಸ್

ಜಿ-20 ಶೃಂಗಸಭೆ ವೇಳೆ 15 ದೇಶದ ನಾಯಕರ ಜತೆ ಪ್ರಧಾನಿ ಮೋದಿ ಪ್ರತ್ಯೇಕ ದ್ವಿಪಕ್ಷೀಯ ಸಭೆ

ನವದೆಹಲಿ: ನಾಳೆಯಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎರಡು ದಿನಗಳ ಜಿ-20 ಶೃಂಗಸಭೆ ಆರಂಭವಾಗಲಿದೆ. ಜಾಗತಿಕ ನಾಯಕರ ದಂಡು ದೆಹಲಿಯತ್ತ ಧಾವಿಸುತ್ತಿದ್ದು, ಇಂದು ರಾತ್ರಿಯಷ್ಟರಲ್ಲಿ ಎಲ್ಲ ನಾಯಕರು ದೆಹಲಿಗೆ ಬಂದಿಳಿಯಲಿದ್ದಾರೆ. ಜಿ-20 ವೇಳೆ 15 ನಾಯಕರ ಜತೆ ಪ್ರಧಾನಿ ಮೋದಿ ಪ್ರತ್ಯೇಕವಾಗಿ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಮಾಹಿತಿ ಪ್ರಕಾರ ಸೆ. 8ರಂದು ಮಾರಿಷಸ್​, ಬಾಂಗ್ಲಾದೇಶ ಮತ್ತು ಅಮೆರಿಕ ನಾಯಕರುಗಳು ಜತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ಸೆ. 9ರಂದು ಯುನೈಟೆಡ್​ ಕಿಂಗ್​ಡಮ್​, ಜಪಾನ್​, ಜರ್ಮನಿ ಮತ್ತು ಇಟಲಿ ನಾಯಕರುಗಳು ಜತೆ ಸಭೆ ಮಾಡಲಿದ್ದಾರೆ. ಸೆ. 10ರ ಕೊನೆಯ ದಿನದಂದು ಫ್ರಾನ್ಸ್​ ಅಧ್ಯಕ್ಷ ಮ್ಯಾಕ್ರಾನ್​ ಅವರ ಜೊತೆ ಪ್ರಧಾನಿ ಮೋದಿ ಭೋಜನ ಸಭೆ ನಡೆಸಲಿದ್ದಾರೆ.

ಇದಿಷ್ಟೇ ಅಲ್ಲದೆ, ಕೆನಡಾ ಅಧ್ಯಕ್ಷ ಜಸ್ಟಿನ್​ ಟ್ರುಡೊ, ಕೊಮೊರೊಸ್, ಟರ್ಕಿ, ಯುಎಇ, ದಕ್ಷಿಣ ಕೊರಿಯಾ, ಇಯು/ಇಸಿ, ಬ್ರೆಜಿಲ್​ ಮತ್ತು ನೈಜೀರಿಯಾ ನಾಯಕರುಗಳ ಸಭೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ.

ಇನ್ನು G20 ನಾಯಕರ ಶೃಂಗಸಭೆಯಲ್ಲಿ 30 ಕ್ಕೂ ಹೆಚ್ಚು ರಾಷ್ಟ್ರಗಳ ಮುಖ್ಯಸ್ಥರು ಮತ್ತು ಯುರೋಪಿಯನ್ ಒಕ್ಕೂಟದ ಉನ್ನತ ಅಧಿಕಾರಿಗಳು ಮತ್ತು ಆಹ್ವಾನಿತ ಅತಿಥಿ ರಾಷ್ಟ್ರಗಳು ಮತ್ತು 14 ಅಂತಾರಾಷ್ಟ್ರೀಯ ಸಂಸ್ಥೆಗಳ ಮುಖ್ಯಸ್ಥರು ಸಹ ಭಾಗವಹಿಸಲಿದ್ದಾರೆ. ದ್ವಿಪಕ್ಷೀಯ ಸಭೆಯಲ್ಲಿ ವ್ಯಾಪಾರ ವೃದ್ಧಿ, ದ್ವಿಪಕ್ಷೀಯ ಸ್ನೇಹ-ಸಂಬಂಧ ಸೇರಿದಂತೆ ಅನೇಕ ವಿಚಾರಗಳ ಕುರಿತು ಪ್ರಧಾನಿ ಮೋದಿ ಚರ್ಚೆ ಮಾಡಲಿದ್ದಾರೆ.

ಜಿ-20 ಸಭೆಗೆ ದೆಹಲಿ ಸಜ್ಜು

ಇದೇ ಮೊದಲ ಬಾರಿಗೆ ಜಾಗತಿಕ ಮಟ್ಟದ ಮಹತ್ವದ ಸಮ್ಮೇಳನ ಭಾರತದಲ್ಲಿ ನಡೆಯುತ್ತಿದ್ದು, 20 ದೇಶಗಳ ಪ್ರಮುಖ ನಾಯಕರು ಭಾಗಿಯಾಗಲಿದ್ದಾರೆ. ಆದರೆ, ಚೀನಾ ಮತ್ತು ರಷ್ಯಾ ಈ ಸಭೆಯಿಂದ ಹೊರಗುಳಿದಿವೆ. ಇಡೀ ವಿಶ್ವವೇ ಜಿ-20 ಸಭೆಯ ಮೇಲೆ ಕಣ್ಣಿಟ್ಟಿದ್ದು, ಇದಕ್ಕಾಗಿ ದೆಹಲಿಯಲ್ಲಿ ಭಾರೀ ಸಿದ್ಧತೆ ನಡೆದಿದೆ. ಸಂಚಾರದ ಮೇಲೆ ಭಾರೀ ನಿರ್ಬಂಧಗಳನ್ನು ಹೇರಲಾಗಿದೆ, ಶಾಲೆಗಳನ್ನು ಮುಚ್ಚಲಾಗಿದೆ, ಭದ್ರತೆಗಾಗಿ ಫೈಟರ್​ ಜೆಟ್​ಗಳನ್ನು ನಿಯೋಜಿಸಲಾಗಿದೆ ಮತ್ತು ಪಟ್ಟಣದಾದ್ಯಂತ ಭಿತ್ತಿಚಿತ್ರಗಳನ್ನು ಅಳವಡಿಸಲಾಗಿದೆ. ಸೆ.9 ಮತ್ತು 10ರಂದು ಎರಡು ದಿನಗಳ ಕಾಲ ನಡೆಯಲಿರುವ ಜಿ-20 ಶೃಂಗಸಭೆ ಯಾವುದೇ ತೊಂದರೆಯಿಲ್ಲದೆ, ಆರಾಮಾಗಿ ನಡೆಯಲು ಬೇಕಾದ ಎಲ್ಲ ಸಿದ್ಧತೆಗಳನ್ನು ದೆಹಲಿಯಲ್ಲಿ ಮಾಡಿಕೊಳ್ಳಲಾಗಿದೆ. ಇಂದು ಬೆಳಗ್ಗೆ 5 ಗಂಟೆಯಿಂದಲೇ ರಾಷ್ಟ್ರ ರಾಜಧಾನಿಯಲ್ಲಿ ಬಿಗಿಯಾದ ಸಂಚಾರ ನಿಯಮಗಳು ಜಾರಿಗೆ ಬಂದಿದ್ದು, ಭಾನುವಾರ ರಾತ್ರಿ 11.59 ರವರೆಗೂ ಈ ನಿರ್ಬಂಧ ಮುಂದುವರಿಯಲಿದೆ. ಆಂಬ್ಯುಲೆನ್ಸ್‌ಗಳು, ಔಷಧಗಳು ಮತ್ತು ಇತರ ಅಗತ್ಯ ಸೇವೆಗಳಲ್ಲಿ ಕೆಲಸ ಮಾಡುವವರಿಗೆ ಮುಕ್ತವಾಗಿ ಚಲಿಸಲು ಅವಕಾಶ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳೀಯರು ಮತ್ತು ಪ್ರವಾಸಿಗರ ವಾಹನಗಳಿಗೆ ತೆರಳಲು ಅನುಮತಿ ನೀಡಲಾಗುತ್ತದೆ ಆದರೆ, ಅವರು ತಂಗಿರುವ ಪ್ರದೇಶದಲ್ಲಿ ಮಾತ್ರ ಓಡಾಡಬಹುದು. ವಾಕಿಂಗ್, ಸೈಕ್ಲಿಂಗ್ ಅಥವಾ ಪಿಕ್ನಿಕ್‌ಗಾಗಿ ಇಂಡಿಯಾ ಗೇಟ್ ಮತ್ತು ಕರ್ತವ್ಯ ಪಥಕ್ಕೆ ಭೇಟಿ ನೀಡದಂತೆ ಅಧಿಕಾರಿಗಳು ಜನರನ್ನು ಒತ್ತಾಯಿಸಿದ್ದಾರೆ.

ಸಂಚಾರವನ್ನು ಸುಗಮಗೊಳಿಸಲು ಶಾಲೆಗಳು, ಬ್ಯಾಂಕ್‌ಗಳು ಮತ್ತು ಎಲ್ಲ ಸರ್ಕಾರಿ ಕಚೇರಿಗಳನ್ನು ಮುಚ್ಚಲಾಗುವುದು. ನೆರೆಯ ರಾಜ್ಯಗಳ ಗಡಿಗಳನ್ನೂ ಮುಚ್ಚಲಾಗುವುದು. 1 ಲಕ್ಷಕ್ಕೂ ಪೊಲೀಸ್​ ಮತ್ತು ಭದ್ರತಾ ಸಿಬ್ಬಂದಿಗಳು ದೆಹಲಿಯ ರಸ್ತೆಗಳಲ್ಲಿ ಗಸ್ತು ತಿರುಗಲಿದ್ದಾರೆ. ಫೈಟರ್​ ಜೆಟ್​​ಗಳು, ಸುಧಾರಿತ ಎಐ ಆಧಾರಿತ ಕ್ಯಾಮೆರಾಗಳು, ಜ್ಯಾಮಿಂಗ್​ ಸಾಧನಗಳು ಮತ್ತು ಸ್ನಿಫ್ಫರ್​ ಶ್ವಾನಗಳನ್ನು ನಿಯೋಜಿಸಲಾಗಿದೆ. ನಗರದಾದ್ಯಂತ ಅಳವಡಿಸಲಾಗಿರುವ 5,000 ಸಿಸಿಟಿವಿ ಕ್ಯಾಮೆರಾಗಳ ನೆಟ್‌ವರ್ಕ್‌ನ ಸಹಾಯದಿಂದ ದೆಹಲಿ ಪೊಲೀಸರು ಶೃಂಗಸಭೆಯ ಸಮಯದಲ್ಲಿ ನಡೆಯುವ ಬೆಳವಣಿಗೆಗಳನ್ನು ಅತ್ಯಾಧುನಿಕ ನಿಯಂತ್ರಣ ಕೊಠಡಿಯಿಂದ ಸೂಕ್ಷ್ಮವಾಗಿ ಗಮನಿಸುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.