ಕೋಲ್ಕತ: ದೇಶದ ಕೆಲವು ಭಾಗಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 100 ರೂಪಾಯಿ ದಾಟಿರುವ ಬೆನ್ನಲ್ಲೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮನ್ ಕೀ ಬಾತ್ ನಡೆಸುವ ಬದಲು ಪೆಟ್ರೋಲ್ ಕೀ ಬಾತ್ ಮಾಡಿ ಎಂದು ಹೇಳಿದ್ದಾರೆ.
ಬುಧವಾರದಂದು ಕೋಲ್ಕತದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಮತಾ ಅವರು, "ಮೋದಿ ಸರ್ಕಾರವು ಇಂಧನದ ಮೇಲಿನ ತೆರಿಗೆಯಿಂದ 71 3.71 ಲಕ್ಷ ಕೋಟಿ ರೂಪಾಯಿ ಗಳಿಸಿದೆ. ಈಗ ಆ ಹಣ ಎಲ್ಲಿದೆ? ಆ ಹಣವನ್ನೇ ಕರೊನಾ ಲಸಿಕೆಗೂ ಬಳಸಲಾಗುತ್ತಿದೆ. ಪ್ರಧಾನಿ ಅವರು ಕೇವಲ 'ಮನ್ ಕೀ ಬಾತ್' ಮಾತ್ರ ಮಾಡುತ್ತಾರೆ. ಅವರು ಪೆಟ್ರೋಲ್ ಮತ್ತು ಡೀಸೆಲ್ ಬಗ್ಗೆ ಏಕೆ ಮಾತನಾಡುವುದಿಲ್ಲ?" ಎಂದು ಪ್ರಶ್ನಿಸಿದ್ದಾರೆ.
ಪ್ರಧಾನಿ ಆದವರು ದೇಶದ ಆರ್ಥಿಕತೆ ಹಾಗೂ ದೇಶದ ಜನರ ಆರೋಗ್ಯ ಬಗ್ಗೆ ಗಮನ ಹರಿಸಬೇಕು. ಅದರ ಬದಲು ಸಚಿವ ಸಂಪುಟ ಪುನರ್ರಚನೆ ಮಾಡುವ ಬಗ್ಗೆ ಅಲ್ಲ ಎಂದೂ ದೀದಿ ಕಾಲೆಳೆದಿದ್ದಾರೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇಂದು ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 100.21 ರೂಪಾಯಿಗೆ ತಲುಪಿದೆ. ಡೀಸೆಲ್ ಪ್ರತಿ ಲೀಟರ್‌ಗೆ 89.53 ರೂಪಾಯಿಯಷ್ಟಾಗಿದೆ.(ಏಜೆನ್ಸೀಸ್)