ನ್ಯೂಸ್

ಹಿರಿಯ ನಟಿ ಲೀಲಾವತಿ ನಿಧನಕ್ಕೆ ಕಂಬನಿ ಮಿಡಿದ ಪ್ರಧಾನಿ ಮೋದಿ

ಬೆಂಗಳೂರು: ಲೀಲಮ್ಮ ಎಂದೇ ಹೆಸರುವಾಸಿಯಾಗಿದ್ದ ಕನ್ನಡ ಚಿತ್ರರಂಗದ ಹೆಸರಾಂತ ಹಿರಿಯ ನಟಿ ಲೀಲಾವತಿ ಅವರು ವಯೋಸಹಜ ಕಾಯಿಲೆಯಿಂದ ಇಂದು ಕೊನೆಯುಸಿರೆಳೆದರು. ಕನ್ನಡ ಚಿತ್ರರಂಗಕ್ಕೆ ಈ ಸಾವು ತಂಬಲಾರದ ನಷ್ಟವಾಗಿದ್ದು, ಸಿನಿಮಾ ಮತ್ತು ರಾಜಕೀಯ ಕ್ಷೇತ್ರದ ಗಣ್ಯರು ಕಂಬನಿ ಮಿಡಿದಿದ್ದಾರೆ. ಇದೀಗ ಪ್ರಧಾನಿ ಮೋದಿ ಅವರು ಕೂಡ ಲೀಲಮ್ಮ ಸಾವಿಗೆ ಸಂತಾಪ ಸೂಚಿಸಿದ್ದಾರೆ.

ಸದಾ ಸ್ಮರಿಸಲಾಗುತ್ತದೆ ಕನ್ನಡ ಚಿತ್ರರಂಗದ ಹೆಸರಾಂತ ನಟಿ ಲೀಲಾವತಿ ಅವರ ನಿಧನದ ಸುದ್ದಿ ಕೇಳಿ ದುಃಖವಾಯಿತು. ಸಿನಿಮಾದ ನೈಜ ಪ್ರತೀಕವಾದ ಅವರು ಹಲವಾರು ಚಲನಚಿತ್ರಗಳಲ್ಲಿ ತಮ್ಮ ಬಹುಮುಖ ನಟನೆಯೊಂದಿಗೆ ಬೆಳ್ಳಿ ಪರದೆಯನ್ನು ಅಲಂಕರಿಸಿದವರು. ಅವರ ವೈವಿಧ್ಯಮಯ ಪಾತ್ರಗಳು ಮತ್ತು ಅದ್ಭುತ ಪ್ರತಿಭೆಯನ್ನು ಸದಾ ಸ್ಮರಿಸಲಾಗುತ್ತದೆ ಮತ್ತು ಪ್ರಶಂಸಿಸಲಾಗುತ್ತದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ ಎಂದು ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ.

ಲೀಲಾವತಿ ಅವರಿಗೆ 85 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಲೀಲಾವತಿ ಅವರು ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಇಂದು ಸಂಜೆ ನಿಧನರಾಗಿದ್ದಾರೆ. ಲೀಲಾವತಿ ಅವರು ಇರುವರೆಗೂ ಅವರಿಗಾಗಿಯೇ ಪ್ರತಿಕ್ಷಣ ಬದುಕಿದ್ದ ಪುತ್ರ ವಿನೋದ್​ ರಾಜ್​ ಅವರನ್ನು ಅಗಲಿ, ಬಾರದ ಲೋಕಕ್ಕೆ ಪಯಣಿಸಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ಲೀಲಾವತಿ ಅವರು ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಹಾಸಿಗೆ ಹಿಡಿದಿದ್ದರು. ನಟ ಶಿವರಾಜ್​ ಕುಮಾರ್​, ನಟ ದರ್ಶನ್​, ದೊಡ್ಡಣ, ಅರ್ಜುನ್​ ಸರ್ಜಾ, ಶ್ರುತಿ, ಸುಧಾರಾಣಿ, ಮಾಳವಿಕಾ ಅವಿನಾಶ್​ ಸೇರಿದಂತೆ ಚಿತ್ರರಂಗದ ಗಣ್ಯರು ನೆಲಮಂಗಲದಲ್ಲಿರುವ ಲೀಲಾವತಿ ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ಇತ್ತೀಚೆಗಷ್ಟೇ ಲೀಲಾವತಿ ಅವರ ಕನಸಿನ ಪಶುವೈದ್ಯಕೀಯ ಆಸ್ಪತ್ರೆಯನ್ನು ಡಿಸಿಎಂ ಡಿಕೆಶಿ ಅವರು ಉದ್ಘಾಟನೆ ಮಾಡಿದ್ದರು.

1938ರಲ್ಲಿ ಲೀಲಾ ಕಿರಣ್​ ಆಗಿ ಜನಿಸಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಬಳಿಕ ಲೀಲಾವತಿಯಾಗಿ ಗುರುತಿಸಿಕೊಂಡ ಕನ್ನಡಿಗರ ನೆಚ್ಚಿನ ಲೀಲಮ್ಮ ಕನ್ನಡ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ನಟಿಸಿದ್ದಾರೆ. 50 ವರ್ಷದ ವೃತ್ತಿ ಜೀವನದಲ್ಲಿ ಸುಮಾರು 600ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡವೊಂದರಲ್ಲೇ 400ಕ್ಕೂ ಅಧಿಕ ಸಿನಿಮಾಗಳಲ್ಲಿ ತಮ್ಮ ಅಮೋಘ ಅಭಿನಯ ಮೂಲಕ ಅಸಂಖ್ಯಾತ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡರು.

ಭಕ್ತ ಕುಂಬಾರ, ಮನ ಮೆಚ್ಚಿದ ಮಡದಿ ಮತ್ತು ಸಂತ ತುಕಾರಾಂ ಸಿನಿಮಾಗಳಲ್ಲಿನ ಅವರ ಅಭಿನಯ ಎಂದಿಗೂ ಮರೆಯುವಂತಿಲ್ಲ. ಇದಿಷ್ಟೇ ಅಲ್ಲದೆ, ಕಣ್ತೆರೆದು ನೋಡು, ಕೈವಾರ ಮಹಾತ್ಮೆ, ಗಾಳಿ ಗೋಪುರ, ಕನ್ಯಾರತ್ನ, ಕುಲವಧು, ವೀರ ಕೇಸರಿ ಸಿನಿಮಾಗಳಲ್ಲಿ ನಟಿಸಿದ್ದಾರೆ. 70 ದಶಕದಲ್ಲಿ ಮುಂಚೂಣಿ ನಾಯಕಿಯರಲ್ಲಿ ಲೀಲಾವತಿ ಕೂಡ ಒಬ್ಬರಾಗಿದ್ದರು.