PM: ಹಿಂಸಾಚಾರ ಪೀಡಿತ ನೇಪಾಳದ ಮಧ್ಯಂತರ ಪ್ರಧಾನಿಯಾಗಿ ಶುಕ್ರವಾರ(ಸೆ.12) ಅಧಿಕಾರ ವಹಿಸಿಕೊಂಡ ಸುಶೀಲಾ ಕರ್ಕಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
"ನೇಪಾಳದ ಮಧ್ಯಂತರ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಮೇಲೆ, ಗೌರವಾನ್ವಿತ ಶ್ರೀಮತಿ ಸುಶೀಲಾ ಕರ್ಕಿ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನೇಪಾಳದಲ್ಲಿರುವ ನಮ್ಮ ಸಹೋದರ ಸಹೋದರಿಯರ ಶಾಂತಿ, ಪ್ರಗತಿ ಮತ್ತು ಸಮೃದ್ಧಿಗೆ ಭಾರತ ಸಂಪೂರ್ಣವಾಗಿ ಬದ್ಧವಾಗಿದೆ" ಎಂದು ಪ್ರಧಾನಿ ಮೋದಿ ನೇಪಾಳಿ ಮತ್ತು ಹಿಂದಿಯಲ್ಲಿ ಎಕಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ನೇಪಾಳದಲ್ಲಿ ಹಿಂಸಾಚಾರದ ಪ್ರತಿಭಟನೆ ಹಿನ್ನಲೆಯಲ್ಲಿ ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ರಾಜೀನಾಮೆ ನೀಡಿದ ನಂತರ, ಮಧ್ಯಂತರ ಸರ್ಕಾರದ ಮುಖ್ಯಸ್ಥೆಯಾಗಿ ನೇಮಕಗೊಂಡಿರುವ ನೇಪಾಳದ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರು ಶುಕ್ರವಾರ ರಾತ್ರಿಯೇ ತುರ್ತು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
73 ವರ್ಷದ ಕರ್ಕಿ ಅವರು ತಮ್ಮ ಸಮಗ್ರತೆ ಮತ್ತು ಶಕ್ತಿಗೆ ವ್ಯಾಪಕವಾಗಿ ಹೆಸರುವಾಸಿಯಾಗಿದ್ದಾರೆ. 2016 ಮತ್ತು 2017 ರ ನಡುವೆ ಮುಖ್ಯ ನ್ಯಾಯಾಧೀಶರಾಗಿದ್ದ ಅವಧಿಯಲ್ಲಿ, ಅವರು ಭ್ರಷ್ಟಾಚಾರದ ವಿರುದ್ಧ ದೃಢವಾದ ನಿಲುವನ್ನು ತೆಗೆದುಕೊಂಡಿದ್ದಕ್ಕಾಗಿ ಹೆಸರುವಾಸಿಯಾಗಿದ್ದರು.(ಏಜೆನ್ಸೀಸ್)