ನ್ಯೂಸ್

ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸೋಣ: 77ನೇ ಸ್ವಾತಂತ್ರ್ಯ ಸಂಭ್ರಮಕ್ಕೆ ಶುಭ ಕೋರಿದ ಪ್ರಧಾನಿ

ನವದೆಹಲಿ: ಇಂದು ದೇಶದೆಲ್ಲೆಡೆ 77ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆ ಮಾಡಿದ್ದು, ಈ ಶುಭ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ದೇಶದ ಜನತೆಗೆ ಶುಭಾಶಯಗಳನ್ನು ತಿಳಿಸಿ, ದೇಶಕ್ಕೆ ಪ್ರಾಣತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿದ್ದಾರೆ.

ಇಂದು ಬೆಳಗ್ಗೆ ತಮ್ಮ ಎಕ್ಷ್​ (ಟ್ವಿಟರ್​) ಖಾತೆಯಿಂದ ಟ್ವೀಟ್​ ಮಾಡಿರುವ ಪ್ರಧಾನಿ, ದೇಶದ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ನಮ್ಮ ಮಹಾನ್ ಸ್ವಾತಂತ್ರ್ಯ ಹೋರಾಟಗಾರರಿಗೆ ನಾವು ಗೌರವ ಸಲ್ಲಿಸೋಣ ಮತ್ತು ಅವರ ವಿಷನ್​ ಅನ್ನು ನೆರವೇರಿಸುವ ಬದ್ಧತೆಯನ್ನು ನಾವು ಪುನರ್​ದೃಢೀಕರಿಸೋಣ ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.

77ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಕೆಂಪು ಕೋಟೆಯಿಂದ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇದು ಅವರ ಸತತ 10 ಸ್ವಾತಂತ್ರ್ಯೋತ್ಸವದ ಭಾಷಣವಾಗಿದೆ. ಮೋದಿ ಅವರು ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ ಬಳಿಕ ಇಂದು ಬೆಳಿಗ್ಗೆ 7.30ರ ಸುಮಾರಿಗೆ ಭಾಷಣ ಆರಂಭಿಸಲಿದ್ದಾರೆ.

ಪ್ರಧಾನಿ ಮೋದಿಯವರ ಭಾಷಣವನ್ನು ರಾಷ್ಟ್ರೀಯ ಸಾರ್ವಜನಿಕ ಪ್ರಸಾರಕ ದೂರದರ್ಶನ ನೇರಪ್ರಸಾರ ಮಾಡಲಿದ್ದು, ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (ಪಿಐಬಿ) ಕೂಡ ತನ್ನ ಯೂಟ್ಯೂಬ್ ಚಾನೆಲ್​ನಲ್ಲಿ ಹಾಗೂ ಅದರ ಟ್ವಿಟರ್ ಹ್ಯಾಂಡಲ್ ನಲ್ಲಿ ಭಾಷಣವನ್ನು ನೇರ ಪ್ರಸಾರ ಮಾಡಲಿದೆ. ಪ್ರಧಾನ ಮಂತ್ರಿ ಕಚೇರಿಯ (ಪಿಎಂಒ) ಅಧಿಕೃತ ಯೂಟ್ಯೂಬ್ ಚಾನೆಲ್ ಕೂಡ ಪ್ರಧಾನಿ ಭಾಷಣವನ್ನು ಪ್ರಸಾರ ಮಾಡಲಿದೆ. (ಏಜೆನ್ಸೀಸ್​)