Patna: ಬಿಹಾರ ವಿಧಾನಸಭಾ ಚುನಾವಣಾ ಪ್ರಚಾರವನ್ನು ಬುಧವಾರ( ಅ 29) ಆರಂಭಿಸಿರುವ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ(Rahul Gandhi), ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಅವರು ಮತ ಪಡೆಯಲು ಏನು ಬೇಕಾದರೂ ಮಾಡುತ್ತಾರೆ ಎಂದರು.
ಮುಜಾಫರ್‌ಪುರದಲ್ಲಿ ಮಹಾ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ರೊಂದಿಗೆ ಜಂಟಿ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್, ನಿಮ್ಮ ಮತಗಳಿಗೆ ಪ್ರತಿಯಾಗಿ ನರೇಂದ್ರ ಮೋದಿಯವರಿಗೆ ನೃತ್ಯ ಮಾಡಲು ಹೇಳಿದರೆ, ಅವರು ವೇದಿಕೆಯ ಮೇಲೆ ನೃತ್ಯ ಮಾಡಲು ಹಿಂಜರಿಯುವುದಿಲ್ಲ ಎಂದು ಹೇಳಿದರು.
ಬಿಹಾರದ ಅತಿದೊಡ್ಡ ಹಬ್ಬವಾದ ಛಠ್ ಪೂಜೆಯನ್ನು ಉಲ್ಲೇಖಿಸಿ ಮಾತನಾಡಿದ ಕಾಂಗ್ರೆಸ್ ನಾಯಕ, ಭಕ್ತರು ದೆಹಲಿಯ ಕಲುಷಿತ ಯಮುನಾ ನದಿಯಲ್ಲಿ ಮಿಂದೆದ್ದು ಪ್ರಾರ್ಥನೆ ಸಲ್ಲಿಸುತ್ತಿರುವಾಗ, ಇತ್ತ ಪ್ರಧಾನಿ ವಿಶೇಷವಾಗಿ ನಿರ್ಮಿಸಲಾದ ಕೊಳದಲ್ಲಿ ಸ್ನಾನ ಮಾಡುವ ಮೂಲಕ ದ್ವಂದ್ವತೆಯನ್ನು ತೋರಿಸಿದ್ದಾರೆ, ಛತ್ ಪೂಜೆಗೂ, ಅವರಿಗೂ ಯಾವುದೇ ಸಂಬಂಧವಿಲ್ಲ. ಅವರಿಗೆ ನಿಮ್ಮ ಮತ ಬೇಕು ಅಷ್ಟೇ, ಅದಕ್ಕಾಗಿ ಏನು ಬೇಕಾದರು ಮಾಡುತ್ತಾರೆ ಎಂದು ಹೇಳಿದರು.
20 ವರ್ಷಗಳ ಕಾಲ ಸುಧೀರ್ಘವಾಗಿ ಬಿಹಾರವನ್ನಾಳಿದ ಆಳಿದ ನಿತೀಶ್, ಹಿಂದುಳಿದ ವರ್ಗಗಳಿಗಾಗಿ ಏನನ್ನೂ ಮಾಡಿಲ್ಲ, ಈಗ ರಾಜ್ಯವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಬಯಸಿರುವ ಬಿಜೆಪಿ, ಜೆಡಿಯು ಮುಖ್ಯಸ್ಥರ ವರ್ಚಸ್ಸನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಿದರು. ನಿತೀಶ್ ಜಿ ಅವರ ಮುಖವನ್ನು ಬಳಸಿಕೊಳ್ಳುತಿದ್ದಾರೆ, ರಿಮೋಟ್ ಕಂಟ್ರೋಲ್ ಬಿಜೆಪಿ ಕೈಯಲ್ಲಿದೆ. ಅವರಿಗೂ, ಸಾಮಾಜಿಕ ನ್ಯಾಯಕ್ಕೂ ಯಾವುದೇ ಸಂಬಂಧವಿಲ್ಲ ಎಂದರು.
ಮತಕಳ್ಳತನದ ಆತಂಕ ಹೊರ ಹಾಕಿದ ರಾಹುಲ್ ಗಾಂಧಿ, ನಿಮ್ಮ ಮತಗಳನ್ನು ಕದಿಯಲು ಕೆಲವರು ಪ್ರಯತ್ನ ನಡೆಸಿದ್ದು, ಈ ಮೂಲಕವೇ ಮಹಾರಾಷ್ಟ್ರದಲ್ಲಿ, ಹರಿಯಾಣದಲ್ಲಿ ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದಾರೆ. ಈಗ ಬಿಹಾರದಲ್ಲಿಯೂ ತಮ್ಮ ಕೈಲಾದಷ್ಟು ಮತಕಳ್ಳತನಕ್ಕೆ ಪ್ರಯತ್ನಿಸುತ್ತಾರೆ, SIR ಎಂದರೆ ಇದೇ. ಆದರೆ ಬಿಹಾರದಲ್ಲಿ ಪ್ರತಿಯೊಂದು ವರ್ಗ, ಪ್ರತಿಯೊಂದು ಜಾತಿ, ಪ್ರತಿಯೊಂದು ಧರ್ಮದ ಸರ್ಕಾರವನ್ನು ರಚಿಸುತ್ತೇವೆ ಎಂದು ನಾವು ನಿಮಗೆ ಭರವಸೆ ನೀಡುತ್ತೇವೆ. ನಾವು ಯಾರನ್ನೂ ಹಿಂದೆ ಉಳಿಯದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದರು.
ನಿರುಗ್ಯೋಗದ ಕುರಿತು ಉಲ್ಲೇಖಿಸಿದ ರಾಹುಲ್ ಗಾಂಧಿ, ನಿಮ್ಮ ಫೋನ್‌ನ್ನು ಚೀನಾದಲ್ಲಿ ತಯಾರಿಸಲಾಗಿದೆ. ಇನ್ನು ಮುಂದೆ ಚೀನಾದಲ್ಲಿ ತಯಾರಿಸಬಾರದು, ಬಿಹಾರದಲ್ಲಿ ತಯಾರಿಸಬೇಕು ಎಂದು ನಾವು ಹೇಳುತ್ತೇವೆ. ಮೊಬೈಲ್‌ಗಳು, ಶರ್ಟ್‌ಗಳು, ಪ್ಯಾಂಟ್‌ಗಳು ಎಲ್ಲವು ಇಲ್ಲೇ ತಯಾರಾಗಬೇಕು, ಇದರಿಂದ ಯುವಕರಿಗೆ ಸ್ಥಳೀಯವಾಗಿ ಉದ್ಯೋಗ ಸಿಗುತ್ತದೆ, ನಿರುದ್ಯೋಗ ಸಮಸ್ಯೆ ದೂರವಾಗುತ್ತದೆ ಎಂದು ಹೇಳಿದರು. ಬಿಹಾರವನ್ನು ಜಾಗತಿಕ ಕಲಿಕಾ ಕೇಂದ್ರವನ್ನಾಗಿ ಮಾಡುವ ಭರವಸೆ ನೀಡಿದ ಲೋಕಸಭೆಯ ವಿಪಕ್ಷ ನಾಯಕ, ಹಿಂದಿನ ಯುಪಿಎ ಸರ್ಕಾರವು ನಳಂದ ವಿಶ್ವವಿದ್ಯಾಲಯವನ್ನು ಪುನರುಜ್ಜೀವನಗೊಳಿಸಲು ಮಾಡಿದ ಪ್ರಯತ್ನಗಳನ್ನು ಈ ವೇಳೆ ಉಲ್ಲೇಖಿಸಿದರು.
ಬಿಹಾರ ವಿಧಾನಸಭಾ ಚುನಾವಣೆಗಳು ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ನಡೆಯಲಿದ್ದು, ನವೆಂಬರ್ 14 ಫಲಿತಾಂಶ ಹೊರಬೀಳಲಿದೆ. ಮಹಾಘಟಬಂದನ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ವಿಪಕ್ಷ ನಾಯಕ ತೇಜಸ್ವಿ ಯಾದವ್ ಹೆಸರನ್ನು ಘೋಷಿಸಲಾಗಿದ್ದು, ಇತ್ತ ಎನ್ಡಿಎ ಮೈತ್ರಿಕೂಟ ಯಾರನ್ನು ತನ್ನ ಸಿಎಂ ಅಭ್ಯರ್ಥಿಯಾಗಿ ಆಯ್ಕೆ ಮಾಡಿಲ್ಲ, ಆದರೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರದ ಅನೇಕ ನಾಯಕರು, ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಚುನಾವಣೆ ಎದುರಿಸುವುದಾಗಿ ತಿಳಿಸಿದ್ದಾರೆ.(ಏಜೆನ್ಸೀಸ್)