ನ್ಯೂಸ್

ಮೋದಿ ಮತ್ತೆ ವಿಶ್ವದ ಅತ್ಯಂತ ಜನಪ್ರಿಯ ನಾಯಕ; ಮಾರ್ನಿಂಗ್ ಕನ್ಸಲ್ಟ್ ಸಮೀಕ್ಷೆಯಲ್ಲಿ ಪ್ರಧಾನಿಗೆ ಶೇಕಡಾ 76ರಷ್ಟು ಅನುಮೋದನೆ

ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದ ಅತ್ಯಂತ ಜನಪ್ರಿಯರಾಗಿದ್ದಾರೆ ಎಂಬ ಸಂಗತಿಯು ಈಗಾಗಲೇ ಅನೇಕ ಸಮೀಕ್ಷೆಗಳಲ್ಲಿ ಬಹಿರಂಗವಾಗಿದೆ. ಈಗ ಮತ್ತೊಮ್ಮೆ ಈ ಸಂಗತಿ ಖಚಿತಪಟ್ಟಿದೆ.

ಅಮೆರಿಕಾ ಮೂಲದ ಸಲಹಾ ಸಂಸ್ಥೆ 'ಮಾರ್ನಿಂಗ್ ಕನ್ಸಲ್ಟ್' ನಡೆಸಿದ ಸಮೀಕ್ಷೆಯ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಅವರು ಶೇಕಡಾ 76ರಷ್ಟು ಅನುಮೋದನೆಯೊಂದಿಗೆ ವಿಶ್ವದ ಅತ್ಯಂತ ಜನಪ್ರಿಯ ನಾಯಕರಾಗಿ ಸ್ಥಾನ ಪಡೆದಿದ್ದಾರೆ. ಈ ರೇಟಿಂಗ್ ಪಟ್ಟಿಯಲ್ಲಿ ನಂತರ ಸ್ಥಾನದಲ್ಲಿರುವ ಅಗ್ರ ನಾಯಕರಿಗಿಂತ ಶೇಕಡಾ 10 ಕ್ಕಿಂತ ಹೆಚ್ಚು ಅಂಕಗಳನ್ನು ಭಾರತದ ಪ್ರಧಾನ ಮಂತ್ರಿಯವರ ಅನುಮೋದನೆ ಹೊಂದಿದೆ.

'ಮಾರ್ನಿಂಗ್ ಕನ್ಸಲ್ಟ್‌ನ ಸೆಪ್ಟೆಂಬರ್ ಸಮೀಕ್ಷೆಯಲ್ಲಿ ಶೇ. 76 ರ ಅನುಮೋದನೆಯೊಂದಿಗೆ ಪ್ರಧಾನಿ ಮೋದಿ ಅವರು ವಿಶ್ವದ ಅತ್ಯಂತ ಜನಪ್ರಿಯ ನಾಯಕರಾಗಿ ತಮ್ಮ ಉನ್ನತ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಹಿಂದಿನ ರೇಟಿಂಗ್‌ಗಳಲ್ಲೂ ಪ್ರಧಾನಿ ಮೋದಿ ಅಗ್ರಸ್ಥಾನದಲ್ಲಿದ್ದರು. ಏಪ್ರಿಲ್ ಸಮೀಕ್ಷೆಯಲ್ಲಿ ಶೇಕಡಾ 76 ರ ಅನುಮೋದನೆಯೊಂದಿಗೆ ಬಿಜೆಪಿ ನಾಯಕನನ್ನು 'ಅತ್ಯಂತ ಜನಪ್ರಿಯ' ನಾಯಕ ಎಂದು ಪ್ರಕಟಿಸಲಾಗಿತ್ತು,

ಪ್ರಧಾನಿ ಮೋದಿ ನಂತರದಲ್ಲಿ ಮೆಕ್ಸಿಕನ್ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ (66%), ಸ್ವಿಜರ್ಲೆಂಡ್ ಅಧ್ಯಕ್ಷ ಅಲೈನ್ ಬರ್ಸೆಟ್ (58%) ಮತ್ತು ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ (49%) ಇದ್ದಾರೆ.

ಗಮನಾರ್ಹವಾಗಿ, ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು 40% ಅನುಮೋದನೆಯ ರೇಟಿಂಗ್‌ನೊಂದಿಗೆ ಈ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದ್ದಾರೆ, ಈ ಸಂಸ್ಥೆಯು ಸಂಗ್ರಹಿಸಿದ ದತ್ತಾಂಶವು 22 ಜಾಗತಿಕ ನಾಯಕರ ಸಮೀಕ್ಷೆಯನ್ನು ಆಧರಿಸಿದೆ.

ಕಳೆದ ಸೆಪ್ಟೆಂಬರ್ 6ರಿಂದ 12ರ ಅವಧಿಯಲ್ಲಿ ಸಂಗ್ರಹಿಸಲಾದ ಮಾಹಿತಿಯ ಪ್ರಕಾರ, ಮೋದಿ ಅವರು ಪಟ್ಟಿಯಲ್ಲಿ ಅತ್ಯಂತ ಕಡಿಮೆ ಅಸಮ್ಮತಿ ರೇಟಿಂಗ್ ಹೊಂದಿದ್ದಾರೆ. ಈ ಅಸಮ್ಮತಿ ರೇಟಿಂಗ್​ ಕೇವಲ ಶೇಕಡಾ 18ರಷ್ಟಿದೆ.

ಅಸಮ್ಮತಿ ದರಗಳಿಗೆ ಸಂಬಂಧಿಸಿದಂತೆ, ಪಟ್ಟಿಯಲ್ಲಿರುವ ಅಗ್ರ 10 ನಾಯಕರ ಪೈಕಿ ಕೆನಡಾದ ಜಸ್ಟಿನ್ ಟ್ರುಡೊ ಅವರು ಶೇಕಡಾ 58ರ ಅತ್ಯಧಿಕ ಅಸಮ್ಮತಿ ರೇಟಿಂಗ್ ಹೊಂದಿದ್ದಾರೆ.

po