ನ್ಯೂಸ್

ಆಗಸ್ಟ್​ 31ಕ್ಕೆ ಪ್ರಧಾನಿ ಮೋದಿ ಚೀನಾ ಪ್ರವಾಸ; ಗಾಲ್ವಾನ್ ಸಂಘರ್ಷ ಬಳಿಕ ಮೊದಲ ಬಾರಿಗೆ ಭೇಟಿ, ಯಾಕೆ?| PM Modi

PM Modi: ಆಗಸ್ಟ್ 31 ಮತ್ತು ಸೆಪ್ಟೆಂಬರ್ 1ರಂದು ಪ್ರಧಾನಿ ಮೋದಿ ಚೀನಾ ಪ್ರವಾಸ ಕೈಗೊಂಡಿದ್ದು, ಟಿಯಾಂಜಿನ್ ನಗರದಲ್ಲಿ ನಡೆಯಲಿರುವ ಎಸ್​ಸಿಓ(ಶಾಂಘೈ ಸಹಕಾರ ಸಂಸ್ಥೆ) ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. 2020ರ ಗಾಲ್ವಾನ್ ಸಂಘರ್ಷದ ಬಳಿಕ ಇದೇ ಮೊದಲ ಬಾರಿಗೆ ಚೀನಾಕ್ಕೆ ಮೋದಿ ಭೇಟಿ ನೀಡುತ್ತಿದ್ದು, ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯಲಿದೆ.

ಪ್ರಧಾನಿ ಮೋದಿ ಅವರು ಕೊನೆಯ ಬಾರಿಗೆ 2019 ರಲ್ಲಿ ಚೀನಾಕ್ಕೆ ಭೇಟಿ ನೀಡಿದ್ದರು. ನಂತರ 2024 ರ ಅಕ್ಟೋಬರ್‌ನಲ್ಲಿ ಕಜಾನ್‌ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿಯಾಗಿದ್ದರು.

ಪ್ರಸ್ತುತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಕಠಿಣ ಸುಂಕಗಳನ್ನು ವಿಧಿಸುತ್ತಿರುವ, ರಷ್ಯಾದಿಂದ ತೈಲ ಖರೀದಿಗೆ ಸಂಬಂಧಿಸಿದಂತೆ ಒತ್ತಡ ಹೇರುತ್ತಿರುವ ಮಧ್ಯ ಪ್ರಧಾನಿ ಚೀನಾಕ್ಕೆ ಭೇಟಿ ನೀಡುತ್ತಿದ್ದಾರೆ. ಚೀನಾದೊಂದಿಗಿನ ಭಾರತ ಸಂಬಂಧ, ಯುಎಸ್​ಗೆ ಸಮತೋಲನ ಅಂಶವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.

ಜೂನ್​ನಲ್ಲಿ ನಡೆದಿದ್ದ ರಕ್ಷಣಾ ಸಚಿವರ ಶೃಂಗ ಸಭೆಯಲ್ಲಿ ಪಹಲ್ಗಾಮ್ ದಾಳಿ ಬಗ್ಗೆ ಯಾವುದೇ ಉಲ್ಲೇಖ ಇಲ್ಲದಿದ್ದಕ್ಕೆ, ಮತ್ತು ಬಲೂಚಿಸ್ತಾನದಲ್ಲಿ ಭಾರತ ಅಶಾಂತಿ ಸೃಷ್ಟಿಸುತ್ತಿದೆ ಎಂಬ ಮೌನ ಆರೋಪಕ್ಕೆ ಸಂಬಂಧಿಸಿದಂತೆ ಜಂಟಿ ಹೇಳಿಕೆಗೆ ಸಹಿ ಹಾಕಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನಿರಾಕರಿಸಿದ್ದರು.

ಪಹಲ್ಗಾಮ್​ ದಾಳಿ ನಡೆಸಿದ್ದ ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾದ ಅಂಗಸಂಸ್ಥೆಯಾದ ರೆಸಿಸ್ಟೆನ್ಸ್​ ಫ್ರಂಟ್​ ಅಮೆರಿಕ ವಿದೇಶಿ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ. ಇದರ ಬೆನ್ನಲ್ಲೆ ಇತ್ತೀಚಿಗೆ ಚೀನಾ ಭಯೋತ್ಪಾದನೆ ವಿರುದ್ಧ ಬಲವಾದ ಹೇಳಿಕೆ ನೀಡಿದೆ.

"ಚೀನಾ ಎಲ್ಲಾ ರೀತಿಯ ಭಯೋತ್ಪಾದನೆಯನ್ನು ವಿರೋಧಿಸುತ್ತದೆ. ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ಉಗ್ರ ದಾಳಿಯನ್ನು ಬಲವಾಗಿ ಖಂಡಿಸುತ್ತದೆ. ಭಯೋತ್ಪಾದನಾ ನಿಗ್ರಹ ಸಹಕಾರವನ್ನು ಹೆಚ್ಚಿಸಲು ಮತ್ತು ಪ್ರಾದೇಶಿಕ ಭದ್ರತೆ ಮತ್ತು ಸ್ಥಿರತೆಯನ್ನು ಜಂಟಿಯಾಗಿ ಕಾಪಾಡಿಕೊಳ್ಳಲು ಚೀನಾ ಪ್ರಾದೇಶಿಕ ದೇಶಗಳಿಗೆ ಕರೆ ನೀಡುತ್ತದೆ" ಎಂದು  ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್ ಹೇಳಿದ್ದಾರೆ.

ಈ ಬಾರಿ SCO ಶೃಂಗಸಭೆಯಲ್ಲಿ 10 ಸದಸ್ಯ ರಾಷ್ಟ್ರಗಳೊಂದಿಗೆ ವ್ಯಾಪಾರದ ಜೊತೆಗೆ ಭಯೋತ್ಪಾದನೆ ಮತ್ತು ಪ್ರಾದೇಶಿಕ ಭದ್ರತೆಯನ್ನು ಚರ್ಚಿಸುವ ನಿರೀಕ್ಷೆಯಿದೆ. ಭಾರತ-ಚೀನಾ ಸಂಬಂಧಗಳಲ್ಲಿ ಸ್ಥಿರತೆ ಮತ್ತು ಸಂವಾದವನ್ನು ಪುನಃಸ್ಥಾಪಿಸಲು ಪ್ರಯತ್ನಗಳನ್ನು ಮಾಡಲಾಗುವುದು. ಸಭೆಯ ಹೊರತಾಗಿ ಪ್ರಧಾನಿ ಮೋದಿ ರಷ್ಯಾ ಅಧ್ಯಕ್ಷ ಪುಟಿನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸುವ ಸಾಧ್ಯತೆಯಿದೆ.

2001 ರಲ್ಲಿ ಸ್ಥಾಪನೆಯಾದ SCO, ಸಹಕಾರದ ಮೂಲಕ ಪ್ರಾದೇಶಿಕ ಸ್ಥಿರತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಈ ಸಂಸ್ಥೆ ಪ್ರಸ್ತುತ 10 ಸದಸ್ಯ ರಾಷ್ಟ್ರಗಳನ್ನು ಹೊಂದಿದೆ. ಬೆಲಾರಸ್, ಚೀನಾ, ಭಾರತ, ಇರಾನ್, ಕಝಾಕಿಸ್ತಾನ್, ಕಿರ್ಗಿಸ್ತಾನ್, ಪಾಕಿಸ್ತಾನ, ರಷ್ಯಾ, ತಜಿಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್. (ಏಜೆನ್ಸೀಸ್)