ನ್ಯೂಸ್

ಅಯೋಧ್ಯೆಯಲ್ಲಿ ಎರಡು ಗಂಟೆ ಕಾಲ ಇರಲಿದ್ದಾರೆ ಪ್ರಧಾನಿ ಮೋದಿ

ಲಖನೌ: ಅಯೋಧ್ಯೆ ಶ್ರೀರಾಮಮಂದಿರದ ಭೂಮಿ ಪೂಜೆಗಾಗಿ ಸಿದ್ಧಗೊಂಡಿದ್ದು, ಐತಿಹಾಸಿಕ ಕ್ಷಣಕ್ಕೆ ಕೌಂಟ್ ಡೌನ್ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಪಾಲ್ಗೊಳ್ಳುವ ಸಾಧ್ಯತೆ ವಿಚಾರ ಈಗಾಗಲೇ ಸುದ್ದಿಯಾಗಿತ್ತು. ಸದ್ಯದ ಮಾಹಿತಿ ಪ್ರಕಾರ, ಪ್ರಧಾನಿ ಮೋದಿಯವರು ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಅಂದಾಜು 2 ಗಂಟೆ ಹೊತ್ತು ಪಾಲ್ಗೊಳ್ಳಲಿದ್ದಾರೆ. ಅವರು ನಾಳೆ ಬೆಳಗ್ಗೆ ದೆಹಲಿಯಿಂದ ಹೊರಟು ವಿಮಾನದಲ್ಲಿ ಆಗಮಿಸಿದ್ದು, ಅವರ ಜತೆಗೆ ಕೆಲವು ಹಿರಿಯ ನಾಯಕರೂ ಪಾಲ್ಗೊಳ್ಳಲಿದ್ದಾರೆ.

ಪ್ರಧಾನಮಂತ್ರಿಯವರ ಪ್ರವಾಸ ಪಟ್ಟಿಯ ಪ್ರಕಾರ ಆಗಸ್ಟ್​ 5ರಂದು ಬೆಳಗ್ಗೆ 9.30ಕ್ಕೆ ವಿಶೇಷ ವಿಮಾನದ ಮೂಲಕ ಲಖನೌಗೆ ಆಗಮಿಸಲಿದ್ದಾರೆ. ಅಲ್ಲಿಂದ ಹೆಲಿಕಾಫ್ಟರ್ ಮೂಲಕ ಅಯೋಧ್ಯೆಗೆ ತಲುಪಲಿದ್ದು, ನಂತರ ಭೂಮಿ ಪೂಜೆಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಅಯೋಧ್ಯೆಗೆ ಅವರು ಬೆಳಗ್ಗೆ 11.30ಕ್ಕೆ ತಲುಪುವ ನಿರೀಕ್ಷೆ ಇದೆ. ಅಯೋಧ್ಯೆಯಲ್ಲಿ ಅವರು ಹನುಮಗಡಿ ದೇವಾಲಯದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ನಂತರ ರಾಮಜನ್ಮಭೂಮಿ ಸ್ಥಳಕ್ಕೆ ತಲುಪಿ ಅಲ್ಲಿ ಭೂಮಿ ಪೂಜೆಯಲ್ಲಿ ಭಾಗಿಯಾಗುತ್ತಾರೆ. ಮಧ್ಯಾಹ್ನ 12.40ಕ್ಕೆ ಶ್ರೀರಾಮಮಂದಿರಕ್ಕೆ ಶಿಲಾನ್ಯಾಸ ನಡೆಯಲಿದ್ದು, ಅದರಲ್ಲಿ ಭಾಗಿಯಾದ ನಂತರ 2 ಗಂಟೆ ಸುಮಾರಿಗೆ ಅಯೋಧ್ಯೆಯಿಂದ ಲಖನೌಗೆ ಹೆಲಿಕಾಫ್ಟರ್ ಮೂಲಕ ಹಿಂದಿರುಗಲಿದ್ದು, ಅಲ್ಲಿಂದ ವಿಶೇಷ ವಿಮಾನದಲ್ಲಿ ದೆಹಲಿಗೆ ತಲುಪಲಿದ್ದಾರೆ.

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ ಈ ಶಿಲಾನ್ಯಾಸ ಕಾರ್ಯಕ್ರಮಕ್ಕೆ 175 ಗಣ್ಯ ಅತಿಥಿಗಳಿಗೆ ಆಹ್ವಾನ ನೀಡಿದೆ. ಭೂಮಿ ಪೂಜೆ ಕಾರ್ಯಕ್ರಮಕ್ಕೆ ಪೂರ್ವಭಾವಿ ಕಾರ್ಯಕ್ರಮಗಳು ಸೋಮವಾರವೇ ಶುರುವಾಗಿದೆ. ಸೋಮವಾರ 12 ಪುರೋಹಿತರು ಗಣೇಶ ಪೂಜೆ ನೆರವೇರಿಸಿದ್ದು, ರಾಮ, ಸೀತೆಯ ಪೂಜೆ ನಡೆದಿದೆ. ಇಂದು ಅಯೋಧ್ಯೆಯ ಹನುಮಗಡಿ ದೇಗುಲದಲ್ಲಿ ವಿಶೇಷ ಪೂಜೆ, ಪ್ರಾರ್ಥನೆಗಳು ನಡೆಯುತ್ತಿವೆ. (ಏಜೆನ್ಸೀಸ್)