ನ್ಯೂಸ್

ನಮ್ಮ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆಗೆ ಕೊನೆಗೂ ಕೂಡಿ ಬಂತು ಮುಹೂರ್ತ!| Namma Metro

Namma Metro: ಬೆಂಗಳೂರಿನ ಬಹು ನಿರೀಕ್ಷಿತ ನಮ್ಮ ಮೆಟ್ರೋ ಹಳದಿ ಮಾರ್ಗವನ್ನು ಆಗಸ್ಟ್ 10 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.

ಈ ವಿಷಯವನ್ನು ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಘೋಷಿಸಿದ್ದಾರೆ.

ಬೆಂಗಳೂರಿನ ಮೂಲಸೌಕರ್ಯವನ್ನು ಉತ್ತೇಜಿಸುವ ಪ್ರಧಾನಿಯವರ ನಿರಂತರ ಬದ್ಧತೆಗೆ ಕೃತಜ್ಞತೆ ಸಲ್ಲಿಸಿರುವ ಸೂರ್ಯ, 5,056.99 ಕೋಟಿ ರೂ ವೆಚ್ಚದಲ್ಲಿ ಸ್ಥಾಪನೆಯಾಗಿರುವ ಈ ಯೋಜನೆಯು, ವಿಶೇಷವಾಗಿ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆಯನ್ನು ನಿವಾರಿಸುವ ಗುರಿಯನ್ನು ಹೊಂದಿದೆ ಎಂದರು.

ಈ ಯೋಜನೆಯಿಂದಾಗಿ ಸುಮಾರು 8 ಲಕ್ಷ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ 19.15 ಕಿ.ಮೀ ಉದ್ದದ ಹೊಸ ಹಳದಿ ಮಾರ್ಗವು 16 ನಿಲ್ದಾಣಗಳನ್ನು ಒಳಗೊಂಡಿದ್ದು, ಬೆಂಗಳೂರಿನ ಜನರಿಗೆ ವಾಹನ ದಟ್ಟಣೆಯನ್ನು ಕಡಿಮೆ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಮೆಟ್ರೋದಂತಹ ಸಾರ್ವಜನಿಕ ಸಾರಿಗೆಯು ನಗರದಲ್ಲಿ ತಲೆದೂರಿರುವ ಸಂಚಾರ ಸಮಸ್ಯೆಗಳಿಗೆ ಏಕೈಕ ಪರಿಹಾರವಾಗಿದೆ ಎಂದು ಬರೆದಿದ್ದಾರೆ.(ಏಜೆನ್ಸೀಸ್)