ನ್ಯೂಸ್

Maha Kumbh 2025 | ರುದ್ರಾಕ್ಷಿ ಕೈಯಲ್ಲಿಡಿದು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ ಪ್ರಧಾನಿ ಮೋದಿ

ಲಖನೌ: ಪ್ರಯಾಗ್‌ರಾಜ್‌ನ ಮಹಾಕುಂಭ ಮೇಳಕ್ಕೆ(Maha Kumbh 2025) ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಆ ಬಳಿಕ ಗಂಗಾಪೂಜೆ ನೆರವೇರಿಸಿದ ಪ್ರಧಾನಿ ಮೋದಿ ಬಳಿಕ ಗಂಗಾನದಿಯಲ್ಲಿಯೇ ರುದ್ರಾಕ್ಷಿ ಹಿಡಿದು ಕೆಲ ಕಾಲ ಜಪ ಮಾಡಿದ್ದಾರೆ.

ಪ್ರಧಾನಿ ಮೋದಿ ಅವರ ಪ್ರಯಾಗ್‌ರಾಜ್ ಭೇಟಿಗೆ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು. ಮಹಾಕುಂಭ ಮೇಳಕ್ಕೆ ಭಾರೀ ಪ್ರಮಾಣದಲ್ಲಿ ಭಕ್ತರು ಆಗಮಿಸಿರುವ ಕಾರಣ ಅವರಿಗೆ ಅಡ್ಡಿ ಆಗಬಾರದು ಎನ್ನುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ತ್ರಿವೇಣಿ ಸಂಗಮಕ್ಕೆ ಬರಲು ಬೇರೆಯದೇ ದಾರಿಯನ್ನು ವ್ಯವಸ್ಥೆ ಮಾಡಲಾಗಿತ್ತು.

ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮ್‌ಘಾಟ್‌ಗೆ ತೆರಳಿದ ಮೋದಿ ಕೊರಳಲ್ಲಿ ರುದ್ರಾಕ್ಷಿ ಮಾಲೆ, ಕೇಸರಿ ಹಾಗೂ ಕಡುನೀಲಿ ವಸ್ತ್ರ ಧರಿಸಿ ಪುಣ್ಯಸ್ನಾನ ಮಾಡಿದ್ದಾರೆ. ಇದೇ ವೇಳೆ ರುದ್ರಾಕ್ಷಿ ಮಾಲೆಯನ್ನು ಹಿಡಿದು ಸೂರ್ಯದೇವ ಹಾಗೂ ಗಂಗಾ ಮಾತೆಗೆ ನಮಿಸಿದ್ದಾರೆ.

ಪ್ರಧಾನಿ ಮೋದಿ ಅಮೃತಸ್ನಾನ ಮಾಡುವ ವೇಳೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಕೂಡ ಅವರ ಜತೆಗಿದ್ದರು. ಎರಡೂವರೆ ಗಂಟೆಗಳ ಕಾಲ ಅವರು ಪ್ರಯಾಗ್‌ರಾಜ್‌ನಲ್ಲಿ ಇರಲಿದ್ದಾರೆ.

ಪ್ರಯಾಗ್‌ರಾಜ್‌ ವಿಮಾನ ನಿಲ್ದಾಣದಿಂದ ಅರೈಲ್‌ ಘಾಟ್‌ಗೆ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ ಅವರು ಅಲ್ಲಿಂದ ಬೋಟ್‌ ಮೂಲಕ ತ್ರಿವೇಣಿ ಸಂಗಮ ತಲುಪಿದರು. ದೆಹಲಿ ವಿಧಾನಸಭೆಗೆ ಮತದಾನ ನಡೆಯುವ ವೇಳೆಯೇ ಪ್ರಧಾನಿ ಕುಂಭಮೇಳಕ್ಕೆ ಭೇಟಿ ನೀಡುತ್ತಿರುವುದು ವಿಶೇಷವಾಗಿದೆ.

ಡಿಸೆಂಬರ್ 13ರಂದು ಪ್ರಯಾಗ್‌ರಾಜ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿಯವರು 5,500 ಕೋಟಿ ರೂ. ಮೌಲ್ಯದ 167 ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ್ದರು. ಇದು ಸಾರ್ವಜನಿಕರಿಗೆ ಸಂಪರ್ಕ, ಸೌಕರ್ಯಗಳು ಮತ್ತು ಸೇವೆಗಳನ್ನು ಸುಧಾರಿಸಿತು. ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಭೆಯಾದ ಮಹಾ ಕುಂಭ 2025, ಪುಷ್ಯ ಪೂರ್ಣಿಮೆಯಂದು (ಜನವರಿ 13) ಪ್ರಾರಂಭವಾಯಿತು . ಮಹಾ ಕುಂಭಮೇಳವು ಫೆಬ್ರವರಿ 26 ರಂದು ಮಹಾ ಶಿವರಾತ್ರಿಯವರೆಗೆ ಮುಂದುವರಿಯುತ್ತದೆ.(ಏಜೆನ್ಸೀಸ್​)