ವಿಜಯನಗರ: ಕಾಂಗ್ರೆಸ್ ಇಂದು ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಹಿಂದು ಸಂಘಟನೆ ಬಜರಂಗದಳವನ್ನು ನಿಷೇಧಿಸುವ ಪ್ರಸ್ತಾಪ ಮಾಡಿರುವುದನ್ನು ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಟೀಕಾ ಪ್ರಹಾರ ನಡೆಸಿದರು.
ವಿಜಯನಗರದ ಹೊಸಪೇಟೆಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ವಿಜಯನಗರ ಸಾಮ್ರಾಜ್ಯದ ಜನತೆಗೆ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲೇ ಮಾತು ಆರಂಭಿಸಿದ ಪ್ರಧಾನಿ ಕಾಂಗ್ರೆಸ್ ಪ್ರಣಾಳಿಕೆ ಮೇಲೆ ವಾಗ್ದಾಳಿ ನಡೆಸಿದರು.
ಹನಮಂತನ ಪವಿತ್ರ ಭೂಮಿಗೆ ನಮಸ್ಕರಿಸುವುದು ನನ್ನ ಸೌಭಾಗ್ಯವಾಗಿದೆ. ನಾನು ಬಂದಾಗಲೇ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧಿಸುವ ಮಾತು ಕೇಳಿದೆ. ಜೈ ಬಜರಂಗಬಲಿ ಎನ್ನುವವರನ್ನು ಬಂಧಿಸುವ ಮಾತು ಕೇಳಿದೆ. ನಿಜಕ್ಕೂ ಇದು ದೌರ್ಭಾಗ್ಯವಾಗಿದೆ. ಮೊದಲು ಕಾಂಗ್ರೆಸ್ಗೆ ರಾಮನಿಂದ ಕಿರಿಕಿರಿಯಾಗುತ್ತಿತ್ತು. ಈಗ ಬಜರಂಗಬಲಿಯಿಂದಲೂ ಕಾಂಗ್ರೆಸ್ಗೆ ತೊಂದರೆಯಾಗಿದೆ ಎಂದು ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು.
ಸ್ನೇಹಿತರೆ ವಿಜಯನಗರ ಸಾಮ್ರಾಜ್ಯದ ಇತಿಹಾಸ ಭಾರತದ ಹೆಮ್ಮೆ. ಶ್ರೀಕೃಷ್ಣ ದೇವರಾಯರ ಉತ್ತಮ ಆಡಳಿತ ಎಲ್ಲರಿಗು ತಿಳಿದಿದೆ. ಅವರು ಕರ್ನಾಟಕದ ಸಂಸ್ಕೃತಿಯನ್ನು ಉತ್ತುಂಗಕ್ಕೆ ಕೊಂಡೊಯ್ದಿದ್ದರು. ಕರ್ನಾಟಕದ ಸಂಸ್ಕೃತಿಗೆ ತೊಂದರೆ ಆಗಲು ಬಿಜೆಪಿ ಬಿಡುವುದಿಲ್ಲ. ಇಲ್ಲಿನ ಜನರಿಗೆ ಆಧುನಿಕ ಸೌಲಭ್ಯ ನೀಡಲು ಬಿಜೆಪಿ ಕಟಿಬದ್ಧವಾಗಿದೆ. ಇಡೀ ದೇಶದಲ್ಲಿ ಕರ್ನಾಟಕವನ್ನು ನಂ.1 ಮಾಡಲು ಬದ್ಧವಾಗಿದೆ ಎಂದರು.
ವಿಜಯನಗರ ಜಿಲ್ಲೆ ಪರಂಪರೆ, ಆಧುನಿಕತೆಯ ಸಮ್ಮಿಳಿತವಾಗಿದೆ. ನೀವೆಲ್ಲರೂ ಇಲ್ಲಿ ಹೊಸ ಜಿಲ್ಲೆ ಬಯಸುತ್ತಿದ್ರಿ. ನಿಮ್ಮ ಬಯಕೆಯಂತೆ ಬಿಜೆಪಿ ಹೊಸ ಜಿಲ್ಲೆ ರಚನೆ ಮಾಡಿತು. ಈ ಮೂಲಕ ಇಲ್ಲಿ ವೇಗದ ಅಭಿವೃದ್ಧಿಯನ್ನು ಖಚಿತಪಡಿಸಿತು. ಕಾಂಗ್ರೆಸ್ ದಶಕಗಳ ಆಡಳಿತದಲ್ಲಿ ನಗರ ಮತ್ತು ಹಳ್ಳಿಗಳ ನಡುವಿನ ಅಂತರ ಹೆಚ್ಚಿಸಿತ್ತು. ಬಿಜೆಪಿ ಸರ್ಕಾರ ಈ ಅಂತರವನ್ನು ಅಳಿಸುವ ಕೆಲಸ ಮಾಡುತ್ತಿದೆ. ಗ್ರಾಮಗಳ ಸಮಸ್ಯೆಗಳಿಗೆ ಬಿಜೆಪಿ ಸರ್ಕಾರ ವೇಗವಾಗಿ ಸ್ಪಂದಿಸುತ್ತಿದೆ ಎಂದು ಹೇಳಿದರು.
ಬಹಳ ದಿನದ ರೈತರ ಬೇಡಿಕೆ ಇದೆ. ಅದನ್ನ ಗಮನಿಸಿ ಈ ಭಾಗದಲ್ಲಿ 70 ಕೆರೆಗಳನ್ನು ನವೀಕರಣ ಮಾಡಲಾಗುತ್ತಿದೆ. ಇದು ಹೊಸ ಜಿಲ್ಲೆಯಾದರೂ ಇಲ್ಲಿ ಕೃಷಿ ಕಾಲೇಜು ಇರಲಿಲ್ಲ. ಈಗ ನಾವು ಕಾಲೇಜು ಪ್ರಾರಂಭ ಮಾಡುತ್ತಿದ್ದೇವೆ. ಹಂಪಿ ಬಗ್ಗೆ ಭಾರತ ಮಾತ್ರವಲ್ಲ, ಇಡೀ ವಿಶ್ವಕ್ಕೆ ಹೆಮ್ಮೆ ಇದೆ. ಆದರೆ ಗುಲಾಮಿ ಮನಸ್ಥಿತಿಯ ಕಾಂಗ್ರೆಸ್ನವರು ಹಂಪಿಯ ಇತಿಹಾಸ ಹಾಗೂ ಪರಂಪರೆಯನ್ನು ಅನುಭವಿಸುತ್ತಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಐವತ್ತು ರೂಪಾಯಿ ನೋಟಿನ ಮೇಲೆ ಕಲ್ಲಿನ ರಥದ ಚಿತ್ರ ಹಾಕಿಸಿದ್ದೇವೆ ಎಂದರು.
ಡಬಲ್ ಇಂಜಿನ್ ಸರ್ಕಾರದಿಂದ ಜನರಿಗೆ ಬಹಳ ಉಪಯೋಗ ಆಗುತ್ತಿದೆ. ಸಾಮಾಜಿಕ ನ್ಯಾಯ ಸಾಮಾಜಿಕ ಸಶಕ್ತಿಕರಣ ಆಗ್ತಿದೆ. ಇದರಿಂದ ಬಡವರ ಹಾಗೂ ದುರ್ಬಲರ ಕಲ್ಯಾಣ ಆಗುತ್ತಿದೆ. ಪ್ರಧಾನ ಮಂತ್ರಿ ಬೆಳೆ ವಿಮೆ ಯೊಜನೆಯಿಂದ ಬಹಳ ಉಪಯೋಗವಾಗ್ತಿದೆ. ರೈತರು ವಿಮೆ ಕಟ್ಟಿದ್ದು 30 ಸಾವಿರ ಕೋಟಿ ರೂಪಾಯಿ. ಆದರೆ ಅವರು ಪಡೆದಿದ್ದು, ಒಂದು ಲಕ್ಷದ ಮುವತ್ತು ಸಾವಿರ ಕೋಟಿ. ನಮ್ಮ ಸರ್ಕಾರ ದೇಶದಲ್ಲಿ ಹನ್ನೊಂದು ಕೋಟಿ ರೈತರಿಗೆ ಕಿಸಾನ್ ಸಮ್ಮಾನ್ ನಿಧಿ ಲಾಭ ನೀಡಿದೆ. ಇದರಲ್ಲಿ 60 ರಷ್ಟು ಎಸ್ಸಿ-ಎಸ್ಟಿ ಹಿಂದುಳಿದವರಿದ್ದಾರೆ. ನಾವು ಇಲ್ಲಿವರೆಗೂ 2.5 ಲಕ್ಷ ಕೋಟಿ ನೀಡಿದ್ದೇವೆ. ಕರ್ನಾಟಕದಲ್ಲಿ 18 ಸಾವಿರ ಕೋಟಿ ಹಣ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ಬಂದಿದೆ. ಹೀಗಾಗಿ ಜನರ ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಎಂದರು.
ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು 2019 ರಲ್ಲಿ ನಾವು ತಂದಾಗ ರಾಜ್ಯದಲ್ಲಿದ್ದ ಮೈತ್ರಿ ಸರ್ಕಾರ ಇದರ ವಿರುದ್ಧ ಷಡ್ಯಂತ್ರ ಮಾಡಿದ್ರು. ಕಾಂಗ್ರೆಸ್-ಜೆಡಿಎಸ್ ನವರಿಂದ ರೈತರಿಗೆ ಅನ್ಯಾಯವಾಗಿದೆ. ರೈತರ ಬಗ್ಗೆ ಕಾಂಗ್ರೆಸ್ ಹಾಗೂ ಜೆಡಿಎಸ್ಗೆ ಕಾಳಜಿ ಇಲ್ಲ. 50 ಲಕ್ಷ ಜನರಿಗೆ ಕಿಸಾನ್ ಸಮ್ಮಾನ್ ನಿಧಿ ಸಿಗದಂತೆ ಮೈತ್ರಿ ಸರ್ಕಾರ ಮಾಡಿತ್ತು. ನಮ್ಮ ಸರ್ಕಾರ ರಾಜ್ಯದಲ್ಲಿ ಬಂದಮೇಲೆ 50 ಲಕ್ಷ ಜನರಿಗೆ ಕಿಸಾನ್ ಸಮ್ಮಾನ್ ಯೋಜನೆಯ ಮೂಲಕ ಹಣ ದೊರೆಯುವಂತೆ ಮಾಡಿತು. ಪ್ರವಾಸಿತಾಣಗಳ ಯೋಜನೆಯಲ್ಲಿ ಹಂಪಿ, ಐಹೊಳಿ, ಬಾದಮಿ, ಪಟ್ಟದಕಲ್ಲು ಸೇರಿ ವಿವಿಧ ಐತಿಹಾಸಿಕ ತಾಣ ಅಭಿವೃದ್ಧಿ ಮಾಡುತ್ತಿದ್ದೇವೆ. ಪ್ರವಾಸಿ ತಾಣಗಳ ಅಭಿವೃದ್ಧಿಯಿಂದ ಯುವಕರಿಗೆ ಉದ್ಯೋಗ ದೊರೆಯುತ್ತದೆ ಎಂದು ಹೇಳಿದರು.