ನ್ಯೂಸ್

ಮೀಸಲಾತಿ ವಿಚಾರದಲ್ಲಿ ಹಸಿ ಸುಳ್ಳು ಹೇಳುವುದು ಪ್ರಧಾನಿ ಮೋದಿ ನಿಲ್ಲಿಸಲಿ; ಸಿಎಂ ಸಿದ್ರಾಮಯ್ಯ ಕಿಡಿ | Reservation

Reservation : ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಬಾರದು ಎಂದು ಬಾಬಾಸಾಹೇಬ್ ಅಂಬೇಡ್ಕರ್ ಹೇಳಿದ್ದಾರೆ ಎನ್ನುವ ಹಸಿ ಹಸಿ ಸುಳ್ಳನ್ನು ದೇಶದ ಪ್ರಧಾನಿಯಾಗಿರುವ ನರೇಂದ್ರ ಮೋದಿ ಅವರು ಹೇಳಿರುವುದು ಅತ್ಯಂತ ವಿಷಾದನೀಯವಾದುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಮತೀಯ ದ್ವೇಷ ಹುಟ್ಟಿಸಬೇಕೆಂಬ ಏಕೈಕ ದುರುದ್ದೇಶದಿಂದ ಈ ರೀತಿಯ ಸುಳ್ಳುಗಳನ್ನು ಹೇಳುವ ಮಟ್ಟಕ್ಕೆ ದಶದ ಪ್ರಧಾನಿ ಇಳಿಯಬಾರದಿತ್ತು ಎಂದು ಪತ್ರಿಕಾ ಹೇಳಿಕೆಯಲ್ಲಿ ಕಿಡಿ ಕಾರಿದ್ದಾರೆ.

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾಷಣ ಮತ್ತು ಬರವಣಿಗೆಗಳ ಹನ್ನೆರಡು ಸಂಪುಟಗಳನ್ನು ಮಹಾರಾಷ್ಟ್ರ ಸರ್ಕಾರ ವರ್ಷಗಳ ಹಿಂದೆಯೇ ಪ್ರಕಟಮಾಡಿದೆ. ಅವುಗಳ ಕನ್ನಡ ಅನುವಾದವನ್ನು ನಮ್ಮ ಸರ್ಕಾರವೇ ಮುದ್ರಿಸಿದೆ. ಅಲ್ಲೆಲ್ಲಾದರೂ ಧರ್ಮಾಧಾರಿತ ಮೀಸಲಾತಿ ಬೇಡ ಇಲ್ಲವೇ ಬೇಕು ಎನ್ನುವ ಅಂಬೇಡ್ಕರ್ ಅವರ ಅಭಿಪ್ರಾಯದ ಉಲ್ಲೇಖ ಇದ್ದರೆ ಅದನ್ನು ಪ್ರಧಾನಿ ಮೋದಿಯವರು ದೇಶದ ಜನರ ಮುಂದಿಡಬೇಕು, ಇಲ್ಲವಾದರೆ ಇಂತಹದ್ದೊಂದು ಸುಳ್ಳನ್ನು ಹೇಳಿರುವುದಕ್ಕಾಗಿ ದೇಶದ ಜನರ ಕ್ಷಮೆಯಾಚಿಸಬೇಕು ಎಂದಿದ್ದಾರೆ.

ಕರ್ನಾಟಕದಲ್ಲಿ ಮುಸ್ಲಿಮರಿಗೆ ನೀಡಲಾಗಿರುವ ಮೀಸಲಾತಿ ಖಂಡಿತ ಧರ್ಮಾಧಾರಿತವಾದುದ್ದಲ್ಲ ಎನ್ನುವ ಸರಳವಾದ ಸತ್ಯವನ್ನು ನರೇಂದ್ರ ಮೋದಿ ಅವರು ಅರ್ಥಮಾಡಿಕೊಳ್ಳದೆ ಹೋಗಿರುವುದು ದುರಂತವೇ ಸರಿ. ಮುಸ್ಲಿಮರಿಗೆ ಅವರೊಳಗಿನ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಹಿಂದುಳಿಯುವಿಕೆಯನ್ನು ಆಧಾರವಾಗಿಟ್ಟುಕೊಂಡು ಮೀಸಲಾತಿ ನೀಡಲಾಗಿದೆಯೇ ಹೊರತು ಅದು ಧರ್ಮಾಧರಿತವಾದುದ್ದಲ್ಲ. ಇದನ್ನು ನಾನು ಹಲವು ಬಾರಿ ವಿಧಾನಮಂಡಲದ ಒಳಗೆ ಮತ್ತು ಹೊರಗೆ ಹೇಳಿದ್ದೇನೆ ಎಂದರು.

ಬಿಜೆಪಿಯ ಮಿತ್ರ ಪಕ್ಷವಾದ ತೆಲುಗುದೇಶಂ ಪಕ್ಷದ ನಾಯಕರು ಮತ್ತು ಆಂದ್ರಪ್ರದೇಶದ ಮುಖ್ಯಮಂತ್ರಿಗಳಾದ ಚಂದ್ರಬಾಬು ನಾಯ್ಡು ಅವರೇ ಬಹಿರಂಗವಾಗಿ ಮುಸ್ಲಿಂ ಮೀಸಲಾತಿಯನ್ನು ಬೆಂಬಲಿಸುತ್ತಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಅಭಿಪ್ರಾಯ ಏನು ಎನ್ನುವುದನ್ನು ನಾನು ತಿಳಿದುಕೊಳ್ಳಬಯಸುತ್ತೇನೆ.

ಮುಸ್ಲಿಂ ಸಮುದಾಯದ ಹಿತರಕ್ಷಣೆಗಾಗಿಯೇ ತಲಾಖ್ ನಿಷೇಧ ಮಾಡಿದ್ದೇವೆ, ವಕ್ಪ್ ಕಾಯ್ದೆಗೆ ತಿದ್ದುಪಡಿ ಮಾಡಿದ್ದೇವೆ ಎಂದು ಒಂದೆಡೆ ತಮ್ಮನ್ನು ಮುಸ್ಲಿಂ ಸಮುದಾಯದ ಸುಧಾರಕರಂತೆ ತಮ್ಮನ್ನು ಬಿಂಬಿಸಿಕೊಳ್ಳುತ್ತಿರುವ ನರೇಂದ್ರ ಮೋದಿ ಅವರು, ಇನ್ನೊಂದೆಡೆ ಬಜರಂಗ ದಳದ ಕಾರ್ಯಕರ್ತನಂತೆ ಕೋಮುದ್ವೇಷವನ್ನು ಉಗುಳುತ್ತಿರುವುದು ಅವರು ಕೂತಿರುವ ಕುರ್ಚಿಗೆ ಮಾಡುತ್ತಿರುವ ಅವಮಾನವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.