ನ್ಯೂಸ್

ಏಳು ರಾಜ್ಯದ ಮುಖ್ಯಮಂತ್ರಿಗಳ ಜತೆ ಕೋವಿಡ್​ ಪರಿಸ್ಥಿತಿ ಪರಿಶೀಲಿಸಿದ ಪ್ರಧಾನಿ ಮೋದಿ

ನವದೆಹಲಿ: ದೇಶದಲ್ಲಿ ಮಹಾಮಾರಿ ಕರೊನಾ ವೈರಸ್​ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೆಚ್ಚು ಕರೊನಾ ಪ್ರಕರಣಳು ವರದಿಯಾಗಿರುವ 7 ಏಳು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಕೋವಿಡ್​-19 ಪರಿಸ್ಥಿತಿ ಪರಿಶೀಲನಾ ಸಭೆ ನಡೆಸಿದರು.

ಬುಧವಾರ ಸಂಜೆ ನಡೆದ ವರ್ಚುವಲ್​ ಸಭೆಯಲ್ಲಿ ಏಳು ರಾಜ್ಯದ ಮುಖ್ಯಮಂತ್ರಿಗಳಲ್ಲದೆ, ಆರೋಗ್ಯ ಮಂತ್ರಿಗಳು ಸಹ ಭಾಗವಹಿಸಿದರು. ಮಹಾರಾಷ್ಟ್ರ, ಆಂಧ್ರ ಪ್ರದೇಶ, ಕರ್ನಾಟಕ, ಉತ್ತರ ಪ್ರದೇಶ, ತಮಿಳುನಾಡು, ದೆಹಲಿ ಮತ್ತು ಪಂಜಾಬ್​ ರಾಜ್ಯದ ಪ್ರತಿನಿಧಿಗಳು ಪ್ರಧಾನಿಯೊಂದಿಗೆ ಚರ್ಚಿಸಿದರು. ದೇಶದ ಒಟ್ಟು ಕರೊನಾ ಪ್ರಕರಣದ ಶೇ. 63 ರಷ್ಟು ಪ್ರಕರಣಗಳು ಮತ್ತು ಒಟ್ಟಾರೆ ಸಾವುಗಳಲ್ಲಿ ಶೇ. 77 ರಷ್ಟು ಪ್ರಕರಣಗಳು ಈ ಏಳು ರಾಜ್ಯಗಳಿಂದ ವರದಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇತರ ಐದು ರಾಜ್ಯಗಳ ಜತೆಗೆ ಪಂಜಾಬ್ ಮತ್ತು ದೆಹಲಿಯಲ್ಲಿ ಇತ್ತೀಚೆಗೆ ಕರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಮಹಾರಾಷ್ಟ್ರ, ಪಂಜಾಬ್​ ಮತ್ತು ದೆಹಲಿಯಲ್ಲಿ ಶೇ. 2ಕ್ಕಿಂತಲೂ ಹೆಚ್ಚಿನ ಮರಣ ಪ್ರಮಾಣದೊಂದಿಗೆ ಹೆಚ್ಚು ಸಾವುಗಳಾಗುತ್ತಿವೆ ಎಂದು ವರದಿಯಾಗಿದೆ.

ಹೀಗಾಗಿ ಕರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಹಯೋಗ ಮತ್ತು ಸಮನ್ವಯದೊಂದಿಗೆ ಕೋವಿಡ್​ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲಿದೆ ಎಂದು ಕೇಂದ್ರ ಸರ್ಕಾರ ಹೇಳಿಕೆ ನೀಡಿದೆ. (ಏಜೆನ್ಸೀಸ್​)