ನ್ಯೂಸ್

ಮೋದಿ vs ರಾಹುಲ್​ ಯಾರು ಜನಪ್ರಿಯರು? ಸೋಶಿಯಲ್​ ಮೀಡಿಯಾ ಡೇಟಾ ಹಂಚಿಕೊಂಡ ಕಾಂಗ್ರೆಸ್​, ಬಿಜೆಪಿ

ನವದೆಹಲಿ: ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್​ ಮತ್ತು ಆಡಳಿತಾರೂಢ ಬಿಜೆಪಿ ಶನಿವಾರ ಹೊಸ ಬಗೆಯ ವಾಗ್ಯುದ್ಧದಲ್ಲಿ ತೊಡಗಿಕೊಂಡಿದ್ದವು. ಈ ಬಾರಿ ಯಾವುದೇ ಹಗರಣ, ವಿವಾದ, ಗಲಭೆ ಅಥವಾ ಹಿಂಸಾಚಾರ ಕುರಿತಾಗಲಿ ಪರಸ್ಪರ ಕಿತ್ತಾಡಿಕೊಳ್ಳಲಿಲ್ಲ. ಇದರ ಬದಲಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ನಡುವಿನ ಜನಪ್ರಿಯತೆ ವಿಚಾರವಾಗಿ ಉಭಯ ಪಕ್ಷಗಳು ಪರಸ್ಪರ ಮಾತಿನ ಯುದ್ಧಕ್ಕೆ ಇಳಿದವು. ಇಬ್ಬರ ಜನಪ್ರಿಯತೆ ಅಳೆಯಲು ಉಭಯ ಪಕ್ಷಗಳು ಆರಿಸಿಕೊಂಡ ಮಾನದಂಡ ಯಾವುದೆಂದರೆ ಉಭಯ ನಾಯಕರ ಸಾಮಾಜಿಕ ಜಾಲತಾಣ ಖಾತೆಗಳ ಎಂಗೇಜ್​​ಮೆಂಟ್.

ಈ ವಾಗ್ಯುದ್ಧವನ್ನು ಮೊದಲು ಆರಂಭಿಸಿದ್ದು ಕಾಂಗ್ರೆಸ್​. ಸಂಸದ್ ಟಿವಿ ಯೂಟ್ಯೂಬ್​ ಚಾನೆಲ್​ ವೀಕ್ಷಕರ ಸಂಖ್ಯೆಯನ್ನು ಹೊಂದಿರುವ ಸ್ಕ್ರೀನ್​ ಶಾಟ್​ ಶೇರ್​ ಮಾಡಿಕೊಂಡ ಕಾಂಗ್ರೆಸ್, ಸಂಸತ್ತಿನಲ್ಲಿ ನಡೆದ​ ಪ್ರಧಾನಿ ಮೋದಿ ಭಾಷಣಕ್ಕಿಂತ ರಾಹುಲ್​ ಗಾಂಧಿ ಭಾಷಣವನ್ನು ಜನ ಹೆಚ್ಚು ನೋಡಿದ್ದಾರೆ. ಹೀಗಾಗಿ ರಾಹುಲ್​ ಜನಪ್ರಿಯತೆ ದಿನೇ ದಿನೆ ಹೆಚ್ಚಾಗುತ್ತಿದ್ದು, ಮೋದಿ ಜನಪ್ರಿಯತೆ ಕಡಿಮೆಯಾಗುತ್ತಿದೆ ಎಂಬ ವಾದವನ್ನು ಮುಂದಿಟ್ಟಿದೆ.

ಇದಿಷ್ಟೇ ಅಲ್ಲದೆ, ರಾಹುಲ್ ಗಾಂಧಿ ಮತ್ತು ಪ್ರಧಾನಿ ಮೋದಿಯವರ ಟ್ವೀಟ್‌ಗಳಿಗೆ ಸಂಬಂಧಿಸಿದಂತೆ ಡೇಟಾ ವಿಶ್ಲೇಷಣೆಯನ್ನೂ ಸಹ ಕಾಂಗ್ರೆಸ್ ಬಿಡುಗಡೆ ಮಾಡಿದೆ. ಕಾಂಗ್ರೆಸ್​ ಪಕ್ಷದ ಸಾಮಾಜಿಕ ಜಾಲತಾಣ ವಿಂಗ್​ ಪ್ರಕಾರ ರಾಹುಲ್​​ ಅವರ ಕೊನೆಯ 30 ಟ್ವೀಟ್ಸ್​ 48.13 ಮಿಲಿಯನ್​ ಇಂಪ್ರೆಸ್ಸನ್​ ಪಡೆದಿದ್ದರೆ, ಪ್ರಧಾನಿ ಮೋದಿ ಅವರ ಕೊನೆಯ 30 ಟ್ವೀಟ್ಸ್​ 21.59 ಮಿಲಿಯನ್​ ಇಂಪ್ರೆಸನ್​ ಪಡೆದಿದೆ ಎಂದು ಹೇಳಿದೆ. ಇಂದು ಮಾಹಿತಿಯನ್ನು ಸಂಗ್ರಹಿಸಿ ಹೋಲಿಕೆ ಮಾಡಲಾಗಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ.

ಕಾಂಗ್ರೆಸ್​ನ ಈ ಹೊಸ ವಾದಕ್ಕೆ ತಕ್ಷಣವೇ ಪ್ರತಿ ವಾದ ಮಂಡಿಸಿರುವ ಬಿಜೆಪಿ, ಜಾಲತಾಣದ ವೇದಿಕೆಗಳಲ್ಲಿನ ಎಂಗೇಜ್​ಮೆಂಟ್​ಗೆ ಹೋಲಿಕೆ ಮಾಡಿದರೆ, ಪಿಎಂ ಮೋದಿ ಅವರೇ ನಿಜವಾದ ವಿಜೇತ ಎಂದು ತೋರಿಸುವ ದತ್ತಾಂಶವನ್ನು ಶೇರ್​ ಮಾಡಿಕೊಂಡು ಕಾಂಗ್ರೆಸ್​ಗೆ ತಿರುಗೇಟು ನೀಡಿದೆ.

ಪ್ರಧಾನಿ ಮೋದಿಯವರ X (ಹಿಂದೆ ಟ್ವಿಟರ್ ಎಂದು ಕರೆಯಲಾಗುತ್ತಿತ್ತು) ಖಾತೆಯು ಕಳೆದ ಒಂದು ತಿಂಗಳಲ್ಲಿ ಸರಿಸುಮಾರು 79.9 ಲಕ್ಷ ಎಂಗೇಜ್​ಮೆಂಟ್​ಗಳನ್ನು ಸ್ವೀಕರಿಸಿದರೆ, ರಾಹುಲ್ ಗಾಂಧಿಯವರ ಖಾತೆಯು ಸರಿಸುಮಾರು 23.43 ಲಕ್ಷ ಎಂಗೇಜ್​ಮೆಂಟ್​ಗಳನ್ನು ಸ್ವೀಕರಿಸಿದೆ ಎಂದು ಬಿಜೆಪಿ ಹೇಳಿದೆ ಮತ್ತು ಇದಕ್ಕೆ ಸಂಬಂಧಿಸಿದ ಸ್ಕ್ರೀನ್​ಶಾಟ್​ ಸಹ ಶೇರ್​ ಮಾಡಿಕೊಂಡಿದೆ.

ಫೇಸ್​ಬುಕ್​ ವಿಚಾರಕ್ಕೆ ಬಂದರೆ, ಕಳೆದ ಒಂದು ತಿಂಗಳಲ್ಲಿ ಪಿಎಂ ಮೋದಿ ಅವರ ಖಾತೆಯು ಸರಿಸುಮಾರು 57.89 ಲಕ್ಷ ಎಂಗೇಜ್‌ಮೆಂಟ್‌ಗಳನ್ನು ಸ್ವೀಕರಿಸಿದ್ದರೆ, ರಾಹುಲ್ ಗಾಂಧಿ ಅವರ ಖಾತೆಯು ಸರಿಸುಮಾರು 28.38 ಲಕ್ಷ ಎಂಗೇಜ್‌ಮೆಂಟ್‌ಗಳನ್ನು ಹೊಂದಿದೆ ಎಂದು ಬಿಜೆಪಿ ಹೇಳಿದೆ ಮತ್ತು ಇದಕ್ಕೆ ಸಂಬಂಧಿಸಿದ ಸ್ಕ್ರೀನ್​ಶಾಟ್​ ಸಹ ಶೇರ್​ ಮಾಡಿಕೊಂಡಿದೆ.

ಇನ್ನು ಪ್ರಧಾನಿ ಮೋದಿ ಅವರ ಫೇಸ್‌ಬುಕ್ ಖಾತೆಯ ಒಂದು ವರ್ಷದ ಎಂಗೇಜ್​ಮೆಂಟ್​ ಡೇಟಾಗೆ ಹೋಲಿಕೆ ಮಾಡಿದರೆ ಅವರ ಜನಪ್ರಿಯತೆಯ ಓಟ ಮುಂದಿದೆ. ಬಿಜೆಪಿ ಪ್ರಕಾರ, ಪಿಎಂ ಮೋದಿ ಅವರ ಫೇಸ್‌ಬುಕ್ ಖಾತೆಯು ಈ ವರ್ಷ ಸರಿಸುಮಾರು 3.25 ಕೋಟಿ ಎಂಗೇಜ್‌ಮೆಂಟ್‌ಗಳನ್ನು ಸ್ವೀಕರಿಸಿದ್ದರೆ, ರಾಹುಲ್ ಗಾಂಧಿ ಅವರ ಖಾತೆಯು ಸರಿಸುಮಾರು 1.88 ಕೋಟಿ ಎಂಗೇಜ್‌ಮೆಂಟ್‌ಗಳನ್ನು ಸ್ವೀಕರಿಸಿದೆ ಎಂದು ತಿಳಿಸಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಯೂಟ್ಯೂಬ್ ಚಾನೆಲ್‌ಗಳಿಂದ ಗಳಿಸಿದ ವೀಕ್ಷಕರ ಡೇಟಾವನ್ನು ಸಹ ಬಿಜೆಪಿ ಹಂಚಿಕೊಂಡಿದೆ. ಕಳೆದ ಒಂದು ತಿಂಗಳಲ್ಲಿ ಪಿಎಂ ಮೋದಿ ಅವರ ಯೂಟ್ಯೂಬ್​​ ಚಾನೆಲ್ ಸರಿಸುಮಾರು 25.46 ಕೋಟಿ ವೀಕ್ಷಣೆಗಳನ್ನು ಗಳಿಸಿದ್ದರೆ, ರಾಹುಲ್ ಗಾಂಧಿ ಅವರ ಚಾನೆಲ್ ಸರಿಸುಮಾರು 4.82 ಕೋಟಿ ವೀಕ್ಷಣೆಗಳನ್ನು ಗಳಿಸಿದೆ ಎಂದು ಬಿಜೆಪಿ ಹೇಳಿದೆ. ಇನ್ನು ವರ್ಷದ ವಿಚಾರಕ್ಕೆ ಬಂದರೆ, ಪಿಎಂ ಮೋದಿ ಅವರ ಯೂಟ್ಯೂಬ್ ಚಾನೆಲ್ ಸರಿಸುಮಾರು 75.79 ಕೋಟಿ ವೀಕ್ಷಣೆಗಳನ್ನು ಗಳಿಸಿದ್ದರೆ, ರಾಹುಲ್ ಗಾಂಧಿ ಅವರ ಖಾತೆಯು ಸರಿಸುಮಾರು 25.38 ಕೋಟಿ ವೀಕ್ಷಣೆಗಳನ್ನು ಗಳಿಸಿದೆ ಎಂದು ಬಿಜೆಪಿ ತಿಳಿಸಿದೆ.

ಭಾರತೀಯ ಜನತಾ ಪಕ್ಷವು ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ ಅವರ ಇನ್‌ಸ್ಟಾಗ್ರಾಮ್ ಖಾತೆಗಳ ಸ್ಕ್ರೀನ್‌ಶಾಟ್‌ಗಳನ್ನು ಲಗತ್ತಿಸಿದ್ದು, ಈ ಸ್ಕ್ರೀನ್‌ಶಾಟ್‌ಗಳೇ ವೀಕ್ಷಕರ ಸಂಖ್ಯೆಗಳ ಬಗ್ಗೆ ಮಾತನಾಡುತ್ತವೆ ಎನ್ನುವ ಮೂಲಕ ಕಾಂಗ್ರೆಸ್​ಗೆ ತಿರುಗೇಟು ನೀಡಿದೆ. (ಏಜೆನ್ಸೀಸ್​)