ನ್ಯೂಸ್

ಭಾರತ-ಚೀನಾ ಗಡಿ ಘರ್ಷಣೆ: ಪ್ರಧಾನಿ ಮೋದಿಗೆ ಕರೆ ಮಾಡಿ ಡೊನಾಲ್ಡ್​ ಟ್ರಂಪ್​ ಚರ್ಚಿಸಿದ್ದೇನು?

ವಾಷಿಂಗ್ಟನ್​: ಭಾರತ ಮತ್ತು ಚೀನಾ ಗಡಿಯಲ್ಲಿ ಉಂಟಾಗಿರುವ ಉದ್ವಿಗ್ನತೆ ಸರಿ ಪಡಿಸಲು ಮಧ್ಯಸ್ಥಿಕೆ ವಹಿಸುವುದಾಗಿ ಆಫರ್​ ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದು, ಎರಡು ದೇಶಗಳ ನಡುವೆ ಪರಿಸ್ಥಿತಿ ಸರಿಯಿಲ್ಲದಿರುವುದರಿಂದ ಪ್ರಧಾನಿ ಮೋದಿ ಒಳ್ಳೆಯ ಮೂಡ್​ನಲ್ಲಿ ಇಲ್ಲವೆಂದು ತಿಳಿಸಿದ್ದಾರೆ.

ಗುರುವಾರ ವೈಟ್​ಹೌಸ್​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅತಿದೊಡ್ಡ ಜನಸಂಖ್ಯೆ ಇರುವ ಎರಡು ರಾಷ್ಟ್ರಗಳ ನಡುವೆ ಬಹಿದೊಡ್ಡ ಘರ್ಷಣೆ ಉಂಟಾಗಿದೆ. ಎರಡು ದೇಶಗಳು ಸಹ ಬಲಿಷ್ಠವಾದ ಸೇನಾ ಪಡೆಗಳನ್ನು ಹೊಂದಿವೆ. ಘರ್ಷಣೆಯಿಂದ ಭಾರತ ಸಂತೋಷವಾಗಿಲ್ಲ ಮತ್ತು ಬಹುಶಃ ಚೀನಾ ಕೂಡ ಖುಷಿಯಾಗಿಲ್ಲ ಎಂದು ಹೇಳಿದರು.

ಈ ದೇಶ (ಅಮೆರಿಕ) ದಲ್ಲಿ ಮಾಧ್ಯಮಗಳು ನನ್ನನ್ನು ಇಷ್ಟಪಡುವುದಕ್ಕಿಂತ ಭಾರತದಲ್ಲಿ ನನ್ನನ್ನು ಹೆಚ್ಚು ಇಷ್ಟಪಡುತ್ತಾರೆಂದು ನಾನು ಭಾವಿಸುತ್ತೇನೆ. ನಾನು ಮೋದಿ ಅವರನ್ನು ಇಷ್ಟಪಡುತ್ತೇನೆ. ನಿಮ್ಮ ಪ್ರಧಾನಿಯನ್ನು ಹೆಚ್ಚು ಗೌರವಿಸುತ್ತೇವೆ. ಅವರೊಬ್ಬ ಉತ್ತಮ ವ್ಯಕ್ತಿ ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು.

ಪ್ರಧಾನಿ ಮೋದಿ ಅವರೊಂದಿಗೆ ದೂರವಾಣಿಯಲ್ಲಿ ಏನು ಮಾತನಾಡಿದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಆದರೆ, ಚೀನಾದೊಂದಿಗೆ ನಡೆಯುತ್ತಿರುವ ವಿದ್ಯಾಮಾನಗಳ ಬಗ್ಗೆ ಅವರ ಮನಸ್ಥಿತಿ ಸರಿಯಿಲ್ಲ ಎಂದು ಹೇಳಿದರು. (ಏಜೆನ್ಸೀಸ್​)