ನ್ಯೂಸ್

PM Modi Manipur visit | ಮಣಿಪುರಕ್ಕೆ ಪ್ರಧಾನಿ ಮೋದಿ ಭೇಟಿ..?

PM Modi Manipur visit: ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ ಮಧ್ಯದಲ್ಲಿ ಈಶಾನ್ಯ ರಾಜ್ಯಗಳಿಗೆ ಪ್ರಯಾಣಿಸುವ ನಿರೀಕ್ಷೆಯಿದೆ, ಮಿಜೋರಾಂನ ಅವರ ಖಚಿತ ಭೇಟಿಯನ್ನು ಪಕ್ಕದ ಮಣಿಪುರಕ್ಕೂ ವಿಸ್ತರಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭೇಟಿ ಅಧಿಕೃತವಾದರೆ, ಜನಾಂಗೀಯ ಘರ್ಷಣೆಗಳು ಭುಗಿಲೆದ್ದು 28 ತಿಂಗಳ ಬಳಿಕ ಮೊದಲ ಬಾರಿ ರಾಜ್ಯಕ್ಕೆ ಭೇಟಿ ನೀಡಿದಂತಾಗುತ್ತದೆ. ಪ್ರಧಾನಿ ಮೋದಿ ಮಿಜೋರಾಂ ಕಾರ್ಯಕ್ರಮ ಸೆಪ್ಟೆಂಬರ್ 13 ರಂದು ನಿಗದಿಯಾಗಿದ್ದು, ಈ ಭೇಟಿಯ ವೇಳೆ ಹೊಸ ರೈಲು ಮಾರ್ಗವನ್ನು ಉದ್ಘಾಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಣಿಪುರದ ಕುರಿತಾಗಿ ಇನ್ನೂ ಚರ್ಚೆ ನಡೆಯುತ್ತಿದೆ.

ಇತ್ತೀಚೆಗೆ ಮಣಿಪುರದಲ್ಲಿ ಪರಿಸ್ಥಿತಿ ಸ್ಥಿರವಾಗಿದ್ದು, ಶಾಲೆಗಳು ಮತ್ತು ಮಾರುಕಟ್ಟೆಗಳನ್ನು ಮತ್ತೆ ತೆರೆಯಲಾಗಿದೆ ಮತ್ತು ಅಲ್ಲಿಂದ ಸ್ಥಳಾಂತರಗೊಂಡ ಕುಟುಂಬಗಳು ಕ್ರಮೇಣ ಮನೆಗೆ ಮರಳುತ್ತಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿಯಾಗಿದೆ. ಕಳೆದ ವರ್ಷ ಅಶಾಂತಿ ಭುಗಿಲೆದ್ದ ಬಳಿಕ ಮೋದಿ ಮಣಿಪುರಕ್ಕೆ ಪ್ರಯಾಣಿಸದ ವಿಷಯವಾಗಿ ವಿಪಕ್ಷಗಳು ಅವಕಾಶ ಸಿಕ್ಕಾಗಲೆಲ್ಲ ಪ್ರಧಾನಿಯನ್ನು ಟೀಕಿಸಿದ್ದವು. ಈ ಹಿಂದೆ ನಡೆದ ಹಿಂಸಾಚಾರದ ಸಂದರ್ಭದಲ್ಲಿ ಸುಮಾರು 250 ಜನರು ಸಾವನ್ನಪ್ಪಿದರು ಮತ್ತು 60,000 ಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡರು. ಅನೇಕರು ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ.

ಮಣಿಪುರದಲ್ಲಿ ಈ ವರ್ಷದ ಫೆಬ್ರವರಿ ತಿಂಗಳಲ್ಲಿ ಕೇಂದ್ರ ಸರ್ಕಾರ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಿತು, ಇದರ ನಂತರ ಸಂಸತ್ತಿನ ಎರಡೂ ಸದನಗಳ ಅನುಮೋದನೆ ಪಡೆದು ಆಗಸ್ಟ್ 5 ರಂದು ವಿಸ್ತರಿಸಲಾಯಿತು. ಇದರ ಹೊರತಾಗಿಯೂ, ಮಣಿಪುರ ವಿಧಾನಸಭೆಯನ್ನು ವಿಸರ್ಜಿಸಲಾಗಿಲ್ಲ, ಆಡಳಿತವನ್ನು ಪುನಃಸ್ಥಾಪಿಸಲು ಪ್ರಯತ್ನಗಳು ನಡೆಯುತ್ತಿವೆ.(ಏಜೆನ್ಸೀಸ್​)