ನ್ಯೂಸ್

ರಷ್ಯಾ-ಯುಕ್ರೇನ್​ ಯುದ್ಧ... ಚೀನಾದಲ್ಲಿ ಪುಟಿನ್​ ಭೇಟಿಗೂ ಮೊದಲೇ ಮೋದಿಗೆ ಝೆಲೆನ್ಸ್ಕಿ ಕರೆ! ಹೇಳಿದ್ದಿಷ್ಟು | PM Modi

ಮೋಹನ್​ ಶೆಟ್ಟಿ

PM Modi: ಪ್ರಸ್ತುತ ಚೀನಾಗೆ ತೆರಳಿರುವ ಭಾರತ ಪ್ರಧಾನಿ ನರೇಂದ್ರ ಮೋದಿ, ನಾಳೆ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್​ರ ಜತೆ ಮಾತುಕತೆ ನಡೆಸಲಿದ್ದಾರೆ. ಶಾಂಘೈ ಸಹಕಾರ ಸಂಸ್ಥೆಯ (SCO) ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲಿರುವ ಮೋದಿ, ಈ ಶೃಂಗಸಭೆಯ ಭಾಗವಾಗಿ ಎರಡು ದಿನಗಳ ಕಾಲ ಟಿಯಾಂಜಿನ್‌ನಲ್ಲಿ ಉಳಿಯಲಿದ್ದಾರೆ. ಇದೇ ಸಂದರ್ಭದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್​ರನ್ನು ಭೇಟಿಯಾಗಲಿದ್ದಾರೆ. ಈ ವಿಚಾರ ತಿಳಿದ ಯುಕ್ರೇನೀಯನ್​ ಅಧ್ಯಕ್ಷ ಝೆಲೆನ್ಸ್ಕಿ, ದಿಢೀರ್​ ಮೋದಿ ಅವರಿಗೆ ದೂರವಾಣಿ ಕರೆ ಮಾಡಿ, ಬಹುಮುಖ್ಯ ವಿಷಯವನ್ನು ಪ್ರಸ್ತಾಪಿಸಿದ್ದಾರೆ.

ಝೆಲೆನ್ಸ್ಕಿ ಮಾತು

"ನಾನು ಭಾರತದ ಪ್ರಧಾನಿ ಜೊತೆಗೆ ಮಾತನಾಡಿದೆ. ವಾಷಿಂಗ್ಟನ್‌ನಲ್ಲಿ ಅಧ್ಯಕ್ಷ ಟ್ರಂಪ್ ಅವರೊಂದಿಗೆ ಯುರೋಪಿಯನ್ ನಾಯಕರ ಭಾಗವಹಿಸುವಿಕೆಯೊಂದಿಗೆ ಮಾತುಕತೆ ನಡೆಸುತ್ತಿರುವ ಬಗ್ಗೆ ಅವರಿಗೆ ಮಾಹಿತಿ ನೀಡಿದೆ. ರಷ್ಯಾದ ಮುಖ್ಯಸ್ಥರೊಂದಿಗಿನ ಸಭೆಗೆ ಯುಕ್ರೇನ್ ತನ್ನ ಸಿದ್ಧತೆಯನ್ನು ಪುನರುಚ್ಚರಿಸಿದೆ. ಸುಮಾರು ಎರಡು ವಾರಗಳು ಕಳೆದಿವೆ. ಮತ್ತು ಈ ಸಮಯದಲ್ಲಿ, ರಷ್ಯಾ ರಾಜತಾಂತ್ರಿಕತೆಗೆ ತಯಾರಿ ನಡೆಸಬೇಕಾಗಿದ್ದಾಗ, ಮಾಸ್ಕೋ ಯಾವುದೇ ಸಕಾರಾತ್ಮಕ ಸೂಚನೆಯನ್ನು ನಮಗೆ ನೀಡಿಲ್ಲ. ನಾಗರಿಕರ ಮೇಲೆ ಯುದ್ಧ ದಾಳಿಗಳನ್ನು ನಡೆಸಿ, ಮುಗ್ಧ ಜನರನ್ನು ರಷ್ಯಾ ಬಲಿ ಪಡೆದಿದೆ. ಮೃತರ ಕುಟುಂಬಗಳು ಮತ್ತು ಅವರ ಪ್ರೀತಿಪಾತ್ರರಿಗೆ ಸಂತಾಪ ಸೂಚಿಸಿದ ಪ್ರಧಾನಿಯ ಮಾತುಗಳಿಗೆ ನನ್ನ ಧನ್ಯವಾದಗಳು" ಎಂದರು.

"ಶಾಂಘೈ ಸಹಕಾರ ಸಂಸ್ಥೆಯ ಶೃಂಗಸಭೆಯ ಮೊದಲು ನಾವು ನಮ್ಮ ಮಾತುಕತೆಯನ್ನು ನಡೆಸಿದ್ದೇವೆ. ರಷ್ಯಾ-ಯುಕ್ರೇನ್​ ಯುದ್ಧ ನಿಲ್ಲಿಸುವಲ್ಲಿ ಪ್ರಧಾನಿ ಮೋದಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂಬ ಭರವಸೆಯಿದೆ. ಮುಂದಿನ ದಿನಗಳಲ್ಲಿ ಭಾರತ ಪ್ರಧಾನಿಯನ್ನು ಭೇಟಿಯಾಗಲು ಎದುರುನೋಡುತ್ತಿದ್ದೇನೆ. ಈ ಬಗ್ಗೆ ನನಗೆ ಸಂತೋಷವಿದೆ" ಎಂದು ಝೆಲೆನ್ಸ್ಕಿ ತಿಳಿಸಿದ್ದಾರೆ.

ಮೋದಿ ಮಾತು

"ಇಂದು ಕರೆ ಮಾಡಿದ್ದಕ್ಕಾಗಿ ಯುಕ್ರೇನ್​ ಅಧ್ಯಕ್ಷ ಝೆಲೆನ್ಸ್ಕಿ ಅವರಿಗೆ ಧನ್ಯವಾದ. ನಡೆಯುತ್ತಿರುವ ಸಂಘರ್ಷ, ಅದರ ಮಾನವೀಯ ಅಂಶ, ಶಾಂತಿ ಮತ್ತು ಸ್ಥಿರತೆಯನ್ನು ಪುನಃಸ್ಥಾಪಿಸುವ ಪ್ರಯತ್ನಗಳ ಕುರಿತು ನಾವು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿದ್ದೇವೆ. ಈ ದಿಕ್ಕಿನಲ್ಲಿ ಎಲ್ಲಾ ಪ್ರಯತ್ನಗಳಿಗೆ ಭಾರತ ಸಂಪೂರ್ಣ ಬೆಂಬಲವನ್ನು ನೀಡಲಿದೆ" ಎಂದು ನರೇಂದ್ರ ಮೋದಿ ತಮ್ಮ 'ಎಕ್ಸ್​'ನಲ್ಲಿ ಬರೆದುಕೊಂಡಿದ್ದಾರೆ,(ಏಜೆನ್ಸೀಸ್).