ನ್ಯೂಸ್

ಹೊಸ ಸಂಸತ್​ ಭವನ ಪ್ರವೇಶಿಸಿದ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ: ಮೊಳಗಿತು ಮೋದಿ ಮೋದಿ ಘೋಷಣೆ

ನವದೆಹಲಿ: ಪ್ರತಿಪಕ್ಷಗಳ ಬಹಿಷ್ಕಾರದ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ಇಂದು (ಮೇ 28) ಹೊಸ ಸಂಸತ್​ ಭವನವನ್ನು ಉದ್ಘಾಟಿಸಿದ್ದಾರೆ. ಹೊಸ ಸಂಸತ್ತಿನ ಒಳಗೆ ಪ್ರಧಾನಿ ಮೋದಿ ಪ್ರವೇಶಿಸುತ್ತಿದ್ದಂತೆ ಸದನಸ ಒಳಗಿದ್ದ ಸದಸ್ಯರು ಎದ್ದು ನಿಂತು ಮೋದಿಗೆ ಚಪ್ಪಾಳೆ ತಟ್ಟುವ ಮೂಲಕ ಗೌರವ ಸೂಚಿಸಿದರು. ಅಲ್ಲದೆ, ಮೋದಿ ಮೋದಿ ಎಂಬ ಘೋಷಣೆಗಳು ಸಹ ಮೊಳಗಿದವು.

ಬೆಳಗ್ಗೆ 7.30ರಿಂದ ಹೊಸ ಸಂಸತ್​ ಭವನದ ವಿಧಿ-ವಿಧಾನಗಳು ಆರಂಭವಾದವು. ಲೋಕಸಭಾ ಸ್ಪೀಕರ್​ ಓಂ ಬಿರ್ಲಾ ಮತ್ತು ಪ್ರಧಾನಿ ಮೋದಿ ಪೂಜಾ-ಕೈಂಕರ್ಯದಲ್ಲಿ ಭಾಗಿಯಾದರು. ಬಳಿಕ ಅಧೀನಂ ಶ್ರೀಗಗಳಿಂದ ಪಡೆದ ರಾಜದಂಡ ಸೆಂಗೋಲ್​ ಅನ್ನು ಲೋಕಸಭಾ ಸ್ಪೀಕರ್​ ಸ್ಥಾನದ ಪಕ್ಕದಲ್ಲಿ ಮೋದಿ ಪ್ರತಿಷ್ಠಾಪಿಸಿದರು. ಇದಾದ ಬಳಿಕ ಕೆಲ ಕಾಲ ಕಾರ್ಯಕ್ರಮಕ್ಕೆ ವಿರಾಮ ನೀಡಲಾಯಿತು.

ಇದೀಗ ಎರಡನೇ ಹಂತದ ಕಾರ್ಯಕ್ರಮ ಆರಂಭವಾಗಿದೆ. ಹೊಸ ಸಂಸತ್​ ಕಟ್ಟಡದಲ್ಲಿ ಕಾರ್ಯಕ್ರಮ ಆರಂಭವಾಗಿದ್ದು, ಪ್ರಧಾನಿ ಮೋದಿ ಅವರು ಸಂಸತ್​ ಪ್ರವೇಶಿಸುತ್ತಿದ್ದಂತೆ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಸೇರಿದಂತೆ ಅನೇಕ ಸದಸ್ಯರುಗಳು ಎದ್ದು ನಿಂತು ಪ್ರಧಾನಿ ಮೋದಿ ಅವರಿಗೆ ಚಪ್ಪಾಳೆ ತಟ್ಟುವ ಮೂಲಕ ಗೌರವ ನೀಡಿದರು. ಸದನದಲ್ಲಿ ಮೋದಿ ಮೋದಿ ಎಂಬ ಘೊಷಣೆಗಳು ಸಹ ಮೊಳಗಿತು.

ವಿಪಕ್ಷಗಳ ಬಹಿಷ್ಕಾರ

ಸಮಾರಂಭವನ್ನು ಕಾಂಗ್ರೆಸ್, ಶಿವಸೇನೆ (ಯುಬಿಟಿ), ಎಎಪಿ, ತೃಣಮೂಲ ಕಾಂಗ್ರೆಸ್ (ಟಿಎಂಸಿ), ಮತ್ತು ಜನತಾ ದಳ (ಯುನೈಟೆಡ್) ಸೇರಿದಂತೆ 20 ಕ್ಕೂ ಹೆಚ್ಚು ವಿರೋಧ ಪಕ್ಷಗಳು ಬಹಿಷ್ಕರಿಸಿವೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಆಹ್ವಾನ ನೀಡದೆ ದೇಶದ ಪ್ರಥಮ ಪ್ರಜೆಗೆ ಅವಮಾನಿಸಿದ್ದಾರೆ ಎಂದು ವಿಪಕ್ಷಗಳು ಆರೋಪ ಮಾಡಿವೆ. (ಏಜೆನ್ಸೀಸ್​)