ಬಳ್ಳಾರಿ: ಪ್ರಧಾನಿ ಮೋದಿ ಅವರು ಹೇಳಿದ ಸುಳ್ಳಿಗೆ ಪ್ರತಿಯಾಗಿ ನಾನು ಹಾಕಿದ ಸವಾಲನ್ನು ಸ್ವೀಕರಿಸುವ ಧೈರ್ಯ ತೋರಿಸಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ವ್ಯಂಗ್ಯವಾಡಿದರು.
ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಭಾನುವಾರ(ಡಿ.08) ಹಮ್ಮಿಕೊಂಡಿದ್ದ ಮತದಾರರಿಗೆ ಅಭಿನಂದನೆ ಸಲ್ಲಿಸುವ ಬೃಹತ್ ಮತದಾರರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಉಪಚುನಾವಣೆಯಲ್ಲಿ ಬಿಜೆಪಿಯ ಲೋಕಲ್ ಲೀಡರ್ಗಳಿಂದ ಪ್ರಧಾನಿ ಮೋದಿಯವರರೆಗೂ ಸರಣಿ ಸುಳ್ಳುಗಳನ್ನು ಹೇಳಿದರು. ನೀವು ಆರೋಪ ಸಾಬೀತಿಪಡಿಸಿ, ನಾನು ರಾಜಕೀಯ ನಿವೃತ್ತಿ ತಗೊತೀನಿ ಎಂದು ಮೋದಿಯವರಿಗೆ ಸವಾಲು ಹಾಕಿದ್ದೆ. ಅವರು ಸವಾಲು ಸ್ವೀಕರಿಸುವ ಧೈರ್ಯ ತೋರಿಸಲಿಲ್ಲ ಎಂದರು.
2014-2018 ರಲ್ಲಿ ನರೇಂದ್ರ ಮೋದಿಯವರು ಕೊಟ್ಟ ಭರವಸೆಗಳನ್ನು ನೆನಪಿಸಿಕೊಳ್ಳಿ. ಅವುಗಳಲ್ಲಿ ಒಂದನ್ನಾದರೂ ಈಡೇರಿಸಿದ್ದಾರಾ ನೋಡಿ. ಮೋದಿಯವರು ನಿಮಗೆ ಈ ಮಟ್ಟದ ಮೋಸ ಮಾಡಿದ್ದಾರಲ್ಲಾ ಇದನ್ನು ಪ್ರಶ್ನಿಸಬೇಕಿದೆ ಎಂದ ಅವರು, ಮೋದಿ ಅಚ್ಚೆ ದಿನ್ ತರಲಿಲ್ಲ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡಲಿಲ್ಲ, ವಿದೇಶದಿಂದ ಕಪ್ಪು ಹಣ ತರಲಿಲ್ಲ, ನಿಮ್ಮ ಖಾತೆಗೆ 15 ಲಕ್ಷ ರೂ. ಹಾಕಲಿಲ್ಲ. ಬರೀ ಭಾಷಣದಲ್ಲೇ ಮೋದಿಯವರು ಎಲ್ಲಾ ಮುಗಿಸಿ ಹೋದರು ಎಂದು ಕಿಡಿಕಾರಿದರು.
ಬಳ್ಳಾರಿ ಜಿಲ್ಲೆಯ ಜನತೆಯನ್ನು ಭಯದಲ್ಲಿಟ್ಟು ರಿಪಬ್ಲಿಕ್ ಬಳ್ಳಾರಿ ಮಾಡಿದ್ದ ಜನಾರ್ದನರೆಡ್ಡಿಗೆ ಬಿಜೆಪಿ ಈ ಚುನಾವಣೆಯ ಉಸ್ತುವಾರಿ ವಹಿಸಿತ್ತು. ಆದರೆ, ಸಂಡೂರಿನ ಜನತೆ ರೆಡ್ಡಿಯವರ ಹಣಕ್ಕೆ, ಭಯಕ್ಕೆ, ಆಮಿಷಕ್ಕೆ, ಸುಳ್ಳುಗಳಿಗೆ, ಅಪಪ್ರಚಾರಕ್ಕೆ ಸೋಲಲಿಲ್ಲ. ಅನ್ನಪೂರ್ಣಮ್ಮ ಅವರನ್ನು ಗೆಲ್ಲಿಸುವ ಮೂಲಕ ಅಭಿವೃದ್ಧಿ ರಾಜಕಾರಣ ಮತ್ತು ಸತ್ಯದ ರಾಜಕಾರಣವನ್ನು ಗೆಲ್ಲಿಸಿದ್ದೀರಿ. ಇದು ಸಂಡೂರಿನ ಘನತೆಯನ್ನು ಹೆಚ್ಚಿಸಿದೆ ಎಂದರು.
ಇವತ್ತಿನವರೆಗೂ ರಾಜ್ಯದಲ್ಲಿ ಬಿಜೆಪಿ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬಂದೇ ಇಲ್ಲ. ಕೇವಲ ಆಪರೇಷನ್ ಕಮಲದ ಮೂಲಕವೇ ಬಿಜೆಪಿ ರಾಜ್ಯದಲ್ಲಿ ಅಧಿಕಾರ ನಡೆಸಿದೆ. ಆಪರೇಷನ್ ಕಮಲಕ್ಕೆ ಬಳಸಿದ ಹಣ ಕೂಡ ಕಪ್ಪು ಹಣ ಅಲ್ಲವೇ ಎಂದು ಪ್ರಶ್ನಿಸಿದರು.
ಮೂರು ಉಪ ಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ರಾಜ್ಯದ ಜನತೆ ನಮ್ಮ ಸರ್ಕಾರಕ್ಕೆ ದೊಡ್ಡ ಆಶೀರ್ವಾದ ಮಾಡಿದ್ದಾರೆ. ನನ್ನ ವಿರುದ್ಧ ಸುಳ್ಳು ಕೇಸು, ಸುಳ್ಳು ಆರೋಪಗಳ ಮೂಲಕ ನನ್ನ ವಿರುದ್ಧ ಷಡ್ಯಂತ್ರ ನಡೆಸಿದ ಬಿಜೆಪಿಗೆ ರಾಜ್ಯದ ಜನತೆ ತಕ್ಕ ಉತ್ತರ ನೀಡಿದ್ದಾರೆ. ನಿಮ್ಮ ಆಶೀರ್ವಾದ ಇರುವವರೆಗೂ ಈ ಸಿದ್ದರಾಮಯ್ಯ ಯಾವುದೇ ಷಡ್ಯಂತ್ರ, ಸುಳ್ಳು ಕೇಸುಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ ಎಂದು ಪುನರುಚ್ಚರಿಸಿದರು.
ಬಾಣಂತಿಯರ ಸಾವಿಗೆ 5 ಲಕ್ಷ ಪರಿಹಾರ
ಬಳ್ಳಾರಿ ಆಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರಿಗೆ ಸರ್ಕಾರ ಪರಿಹಾರದ ಮೊತ್ತವನ್ನು ಐದು ಲಕ್ಷಕ್ಕೆ ಏರಿಸಿದೆ ಎಂದು ಇದೇ ಸಂದರ್ಭದಲ್ಲಿ ಸಿಎಂ ಸಿದ್ದು ಘೋಷಣೆ ಮಾಡಿದರು.