ಶಿಮ್ಲಾ: ಭಾರತ-ಚೀನಾ ಗಡಿಗೆ ಸಮೀಪವಿರುವ ಹಿಮಾಚಲ ಪ್ರದೇಶದ ಲೆಪ್ಚಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಸೈನಿಕರೊಂದಿಗೆ ದೀಪಾವಳಿ ಆಚರಿಸಿದರು.
"ನಮ್ಮ ಕೆಚ್ಚೆದೆಯ ಭದ್ರತಾ ಪಡೆಗಳೊಂದಿಗೆ ದೀಪಾವಳಿ ಆಚರಿಸಲು ಇಲ್ಲಿಗೆ ಬಂದಿದ್ದೇನೆ" ಎಂದು X(ಎಕ್ಸ್) ನಲ್ಲಿ ಸೈನಿಕರೊಂದಿಗೆ ಇರುವ ತಮ್ಮ ಚಿತ್ರಗಳನ್ನು ಹಂಚಿಕೊಂಡಿದ್ದಾರೆ ಪ್ರಧಾನಿ ಮೋದಿ. ಆಲಿವ್ ಹಸಿರು ವಸ್ತ್ರ ಧರಿಸಿದ್ದ ಪ್ರಧಾನಿ ಸೈನಿಕರೊಂದಿಗೆ ಇದೇ ಸಂದರ್ಭ ಸಂವಾದ ನಡೆಸಿದರು.
ಪ್ರಧಾನಿ ಮೋದಿಯವರ ದೀಪಾವಳಿ ಸಂಪ್ರದಾಯ: ಪ್ರಧಾನಿ ಮೋದಿ ಅವರು 2014 ರಿಂದ ದೀಪಾವಳಿಯನ್ನು ಸೈನಿಕರೊಂದಿಗೆ ಆಚರಿಸುವ ಸಂಪ್ರದಾಯವನ್ನು ಅನುಸರಿಸುತ್ತಿದ್ದಾರೆ. ಲಾಹೌಲ್-ಸ್ಪಿತಿ ಜಿಲ್ಲೆಯಲ್ಲಿನ ಲೆಪ್ಚಾವು 13,835 ಚದರ ಕಿ.ಮೀ. ಪ್ರದೇಶ ಹೊಂದಿದ್ದು, ಇಡೀ ಜಿಲ್ಲೆಯ ಹವಾಮಾನ ಪರಿಸ್ಥಿತಿಗಳು ಕಠಿಣವಾಗಿದೆ. ಚಳಿಗಾಲದಲ್ಲಿ ಉಷ್ಣಾಂಶ ಮೈನಸ್ 20 ಡಿಗ್ರಿ ಸೆಲ್ಸಿಯಸ್‌ಗಿಂತ ಕೆಳಕ್ಕೆ ಇಳಿಯಲಿರುವ ಈ ಪ್ರದೇಶಕ್ಕೆ ಬಂದು ಪ್ರಧಾನಿ ಮೋದಿ ಅವರು ದೀಪಾವಳಿ ಹಬ್ಬವನ್ನು ಆಚರಿಸಿದ್ದು ಗಮನಾರ್ಹ ಸಂಗತಿಯಾಗಿದೆ.
ಪ್ರಧಾನಿ ಹುದ್ದೆಯನ್ನು ಸ್ವೀಕರಿಸಿದ ನಂತರ, ಅವರು ಅಂತರರಾಷ್ಟ್ರೀಯ ಗಡಿ ಅಥವಾ ಗಡಿ ನಿಯಂತ್ರಣ ರೇಖೆಯಲ್ಲಿ ಸೈನಿಕರೊಂದಿಗೆ ದೀಪಾವಳಿ ಆಚರಿಸುತ್ತಿರುವುದು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 2014 ರಲ್ಲಿ ಮೋದಿ ಅವರು ಸಿಯಾಚಿನ್ ಗ್ಲೇಸಿಯರ್‌ನಲ್ಲಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿದ್ದರು, 2015 ರಲ್ಲಿ ಅವರು ಅಮೃತಸರ ಗಡಿಯಲ್ಲಿ ಸೈನಿಕರೊಂದಿಗೆ ಸಮಯ ಕಳೆದಿದ್ದರು. 2016 ರಲ್ಲಿ ಅವರು ಹಿಮಾಚಲ ಪ್ರದೇಶದ ಕಿನ್ನೌರ್‌ನಲ್ಲಿ ದೀಪಾವಳಿಯನ್ನು ಆಚರಿಸಿದ್ದರು. 2017 ರಲ್ಲಿ ಅವರು ಜಮ್ಮು ಮತ್ತು ಕಾಶ್ಮೀರದ ಗುರೇಜ್‌ಗೆ ಹೋಗಿದ್ದರು.
2018 ರಲ್ಲಿ ಉತ್ತರಾಖಂಡದ ಕೇದಾರನಾಥದಲ್ಲಿ ಸೇನಾ ಸಿಬ್ಬಂದಿಯೊಂದಿಗೆ ದೀಪಾವಳಿ ಆಚರಿಸಿದರು, 2019 ರಲ್ಲಿ ಅವರು ಜಮ್ಮುವಿನ ರಜೌರಿಗೆ ಹೋಗಿದ್ದರು. 2020 ರಲ್ಲಿ ಅವರು ರಾಜಸ್ಥಾನದ ಜೈಸಲ್ಮೇರ್ನಲ್ಲಿ ದೀಪಾವಳಿಯನ್ನು ಆಚರಿಸಿದರು. 2021 ರಲ್ಲಿ ಅವರು ಜಮ್ಮು ಮತ್ತು ಕಾಶ್ಮೀರದ ನೌಶೆರಾದಲ್ಲಿ ದೀಪಾವಳಿ ಆಚರಿಸಿದ್ದರು. ಕಳೆದ ವರ್ಷ ಅವರು ದೀಪಾವಳಿಯ ಸಮಯದಲ್ಲಿ ಕಾರ್ಗಿಲ್‌ನಲ್ಲಿ ಸೈನಿಕರೊಂದಿಗೆ ಸಮಯ ಕಳೆದಿದ್ದರು.