ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಪುಟಾಣಿಗಳು ಸೇರಿದಂತೆ ಹೆಣ್ಣುಮಕ್ಕಳ ಜತೆ ದೆಹಲಿಯ ತಮ್ಮ ನಿವಾಸದಲ್ಲಿಂದು ರಕ್ಷಾ ಬಂಧನವನ್ನು ಆಚರಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಭಾರಿ ಮೆಚ್ಚುಗೆ ಗಳಿಸುತ್ತಿದೆ.
ಪ್ರಧಾನಿ ಮೋದಿ ಅವರಿಗೆ ರಾಖಿಗಳನ್ನು ಕಟ್ಟಿದ ಮಕ್ಕಳು ಪ್ರಧಾನ ಮಂತ್ರಿ ಕಚೇರಿಯಲ್ಲಿ ಕಸ ಗುಡಿಸುವ, ಗುಮಾಸ್ತ, ತೋಟಗಾರರು, ಚಾಲಕರು ಮತ್ತು ಇತರ ಉದ್ಯೋಗಿಗಳ ಮಕ್ಕಳೆಂಬುದು ಗಮನಾರ್ಹ ವಿಷಯ. ರಾಖಿಗಳನ್ನು ಕಟ್ಟುವ ಮಕ್ಕಳ ಜೊತೆ ಪ್ರಧಾನಿ ಮೋದಿ ಸಂವಹನ ನಡೆಸುವ ದೃಶ್ಯವು ಸಹ ವಿಡಿಯೋದಲ್ಲಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಹೆಣ್ಣು ಮಕ್ಕಳು ರಾಖಿ ಕಟ್ಟುತ್ತಿರುವ ಕೆಲವು ಫೋಟೋಗಳನ್ನು ಶೇರ್ ಮಾಡಿಕೊಂಡು ವಿಶೇಷ ರಕ್ಷಾ ಬಂಧನ ಎಂದು ಬರೆದುಕೊಂಡಿದ್ದಾರೆ.
ರಕ್ಷಾ ಬಂಧನ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ರಕ್ಷಾ ಬಂಧನದ ವಿಶೇಷ ಸಂದರ್ಭದಲ್ಲಿ ಎಲ್ಲರಿಗೂ ಶುಭಾಶಯಗಳು ಎಂದಿದ್ದಾರೆ. (ಏಜೆನ್ಸೀಸ್)