ನ್ಯೂಸ್

ನಮ್ಮನ್ನು ನಮ್ಮೂರಿಗೆ ಕಳುಹಿಸಿ ಕೊಡಿ; ಕಾರ್ಮಿಕರ ಅಳಲು

ಬೆಂಗಳೂರು: ತಮ್ಮನ್ನು ತಮ್ಮೂರಿಗೆ ಕಳುಹಿಸಿಕೊಡುವಂತೆ ಆಗ್ರಹಿಸಿ ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮೂಲದ ಕಾರ್ಮಿಕರು ಭಾನುವಾರ ಪ್ರತಿಭಟನೆ ನಡೆಸಿದರು.

ನೂರಾರು ಸಂಖ್ಯೆಯಲ್ಲಿ ಇರುವ ಇವರು ಸದ್ಯ ಪೀಣ್ಯದ ಅಪಾರ್ಟ್​ಮೆಂಟ್​ ಬಳಿ ಇದ್ದಾರೆ. ಅಲ್ಲಿ ತಮಗೆ ಸರಿಯಾಗಿ ಊಟ, ತಿಂಡಿ ಸಿಗುತ್ತಿಲ್ಲ. ಶೌಚಗೃಹದ ವ್ಯವಸ್ಥೆಯೂ ಸರಿಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಲಾಕ್​ಡೌನ್​ನಿಂದಾಗಿ ಗುತ್ತಿಗೆದಾರರು ನಮಗೆ ಸರಿಯಾಗಿ ಸಂಬಳವನ್ನೂ ಕೊಡುತ್ತಿಲ್ಲ. ಹೀಗಾಗಿ ಒಪ್ಪೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮನ್ನು ತಮ್ಮ ಊರುಗಳಿಗೆ ಕಳುಹಿಸಿಕೊಟ್ಟರೆ ಒಪ್ಪೊತ್ತಿನ ಊಟವಾದರೂ ಮಾಡಿಕೊಂಡು ಬದುಕುತ್ತೇವೆ ಎಂದು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ಬಂದ ಪೀಣ್ಯ ಪೊಲೀಸರು ಪ್ರತಿಭಟನಾಕಾರರ ಅಹವಾಲನ್ನು ಸಾವಕಾಶವಾಗಿ ಆಲಿಸಿದರು. ಬಳಿಕ ಅವರೆಲ್ಲರ ಮನವೊಲಿಸಿ ಪ್ರತಿಭಟನೆ ಸ್ಥಗಿತಗೊಳಿಸುವಂತೆ ಮಾಡಿದ್ದಲ್ಲದೆ, ಅಲ್ಲಿಯೇ ಉಳಿದುಕೊಳ್ಳುವಂತೆ ಮಾಡಿದರು.