| ವಿಲಾಸ ಮೇಲಗಿರಿ/ ಕೇಶವಮೂರ್ತಿ ವಿ.ಬಿ. ಹಾವೇರಿ
ಆಧುನಿಕ ಕಾಲಘಟ್ಟದಲ್ಲಿ ಭಾಷೆ-ಸಂಸ್ಕೃತಿಯನ್ನು ಕಾಪಾಡಿಕೊಂಡು ಹೋಗುವ ಸವಾಲು; ಬೆಳಗಾವಿ ಭಾಗದಲ್ಲಿ ಮಹಾರಾಷ್ಟ್ರದ ಗಡಿ ಕ್ಯಾತೆ, ಮಹದಾಯಿ ವಿಚಾರದಲ್ಲಿ ಗೋವಾ ತಗಾದೆ- ಇತ್ಯಾದಿ ನಡುವೆ ಅಚ್ಚಗನ್ನಡ ನೆಲ ಹಾವೇರಿಯಲ್ಲಿ ಇಂದಿನಿಂದ 3 ದಿನ (ಜ.6, 7 ಮತ್ತು 8) ಅಕ್ಷರ ಜಾತ್ರೆ. ಕನಕದಾಸರ ನಾಡು, ಷರೀಫಜ್ಜನ ಬೀಡು, ಸರ್ವಜ್ಞನ ಊರು, ಏಲಕ್ಕಿ ಕಂಪಿನ ನಾಡಿನಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡದ ಕಹಳೆ ಮೊಳಗಲಿದೆ. ಹುಬ್ಬಳ್ಳಿ ರಸ್ತೆಯ ಅಜ್ಜಯ್ಯನ ಗುಡಿ ಎದುರಿನ ವಿಶಾಲ ಪ್ರದೇಶದಲ್ಲಿ ಬೃಹತ್ ವೇದಿಕೆಗಳು ನಿರ್ವಣಗೊಂಡಿವೆ. ಮುಖ್ಯ ವೇದಿಕೆಗೆ ನಾಡಿನ ಸಾಕ್ಷಿಪ್ರಜ್ಞೆ ಕನಕ-ಷರೀಫ-ಸರ್ವಜ್ಞ ಪ್ರಧಾನ ವೇದಿಕೆ ಎಂದು ಹೆಸರಿಡಲಾಗಿದೆ.
ಈ ಬಾರಿ ಹೊಸತೇನು?: ಸರ್ಕಾರ 20 ಕೋಟಿ ರೂ.ಗಳಷ್ಟು ದೊಡ್ಡ ಮೊತ್ತವನ್ನು ಸಮ್ಮೇಳನಕ್ಕೆ ನೀಡಿದೆ. ಈ ಹಿಂದಿನ ಕಲಬುರಗಿ ಸಮ್ಮೇಳನಕ್ಕೆ 12 ಕೋಟಿ ರೂ. ನೀಡಿತ್ತು. ಸಮ್ಮೇಳನದಲ್ಲಿ ಅರಮನೆ ಮಾದರಿ ಮುಖ್ಯದ್ವಾರ, ವೇದಿಕೆ ಕಂಗೊಳಿಸಲಿದೆ. ಇದೇ ಮೊದಲ ಬಾರಿಗೆ ಉತ್ತರಕನ್ನಡದ ಭುವನಗಿರಿಯ ಭುವನೇಶ್ವರಿ ದೇಗುಲದಿಂದ ಕನ್ನಡ ರಥ ರಾಜ್ಯಾದ್ಯಂತ ಸಂಚರಿಸಿ ಹಾವೇರಿಗೆ ಬಂದಿದೆ. ದೇಗುಲದಿಂದ ಹೊತ್ತಿಸಿಕೊಂಡು ಬಂದ ದೀಪದಿಂದ ಸಮ್ಮೇಳನದ ಜ್ಯೋತಿ ಪ್ರಜ್ವಲನ ಮಾಡಲಾಗುತ್ತಿದೆ. ಸರ್ಕಾರಿ ನೌಕರರ ಜತೆಗೆ ಕಾರ್ವಿುಕ ಇಲಾಖೆಯಿಂದ ಇತರ ಕಾರ್ವಿುಕರಿಗೂ ಒಒಡಿ ಸೌಲಭ್ಯದ ಆದೇಶ ಹೊರಡಿಸಲಾಗಿದೆ.
ಒಂದೇ ಕಡೆ ಮೂರು ವೇದಿಕೆ: ಒಂದೇ ಆವರಣದಲ್ಲಿ ಜರ್ಮನ್ ತಂತ್ರಜ್ಞಾನದಲ್ಲಿ ಸಮ್ಮೇಳನದ ಮುಖ್ಯವೇದಿಕೆ, 2 ಸಮಾನಾಂತರ ವೇದಿಕೆಯ ಬೃಹತ್ ಟೆಂಟ್ಗಳನ್ನು ನಿರ್ವಿುಸಲಾಗಿದೆ. ಮುಖ್ಯ ವೇದಿಕೆಯಲ್ಲಿ 30000 ಆಸನದ ವ್ಯವಸ್ಥೆ ಮಾಡಲಾಗಿದೆ.
ಉದ್ಘಾಟನೆ-ಸಮಾರೋಪ: ಜ.6ರಂದು ಹಾವೇರಿ ಸಮ್ಮೇಳನ ಆವರಣದಲ್ಲಿ 7 ಗಂಟೆಗೆ ಧ್ವಜಾರೋಹಣ. 7.30ಕ್ಕೆ ನಗರದ ಪುರ ಸಿದ್ದೇಶ್ವರ ದೇಗುಲದಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಆರಂಭ. ಬೆಳಗ್ಗೆ 10.30ಕ್ಕೆ ಮುಖ್ಯ ವೇದಿಕೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಸಮ್ಮೇಳನ ಉದ್ಘಾಟನೆ. ಜ.8ರಂದು ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದೆ.
138 ಎಕರೆ ವಿಶಾಲ ವ್ಯಾಪ್ತಿ: ಅಕ್ಷರ ಜಾತ್ರೆಗಾಗಿ 138 ಎಕರೆಯ ಜಾಗವನ್ನು ಬಳಸಿಕೊಳ್ಳಲಾಗಿದೆ. ವಿಶೇಷ ರೀತಿಯಲ್ಲಿ ವಿದ್ಯುತ್ ದೀಪಾಲಂಕಾರ ವ್ಯವಸ್ಥೆಇರಲಿದೆ.
600 ಮಳಿಗೆಗಳು: ಸಮ್ಮೇಳನದಲ್ಲಿ 400ಕ್ಕೂ ಅಧಿಕ ಪುಸ್ತಕ ಮಳಿಗೆ ಹಾಗೂ 200 ವಾಣಿಜ್ಯ ಮಳಿಗೆಗಳಿಗೆ ಅವಕಾಶ ನೀಡಲಾಗಿದೆ.