ಬೆಂಗಳೂರು: (Plastivision India Exhibition) ಅಖಿಲ ಭಾರತ ಪ್ಲಾಸ್ಟಿಕ್ ತಯಾರಕರ ಸಂಘ(ಎಐಪಿಎಂಎ) ಜ. 21ರಿಂದ 25ರವರೆಗೆ ಮುಂಬೈನ ಬಾಂಬೆ ಎಕ್ಸಿಬಿಷನ್ ಸೆಂಟರ್ನಲ್ಲಿ ‘ಪ್ಲಾಸ್ಟಿವಿಷನ್ ಇಂಡಿಯಾ- 2027’ ಸಮಾವೇಶ ಆಯೋಜಿಸಿದೆ.
ವಿಶ್ವದ 2ನೇ ದೊಡ್ಡ ಪ್ಲಾಸ್ಟಿಕ್ ಪ್ರದರ್ಶನ ಇದಾಗಿರಲಿದೆ. ಕಚ್ಚಾವಸ್ತುಗಳು, ಯಂತ್ರೋಪಕರಣಗಳು, ಅಚ್ಚುಗಳು, ತಂತ್ರಜ್ಞಾನ, ಸಿದ್ಧ ಉತ್ಪನ್ನಗಳು ಸೇರಿ ಪ್ಲಾಸ್ಟಿಕ್ ಉದ್ಯಮದ ಸಂಪುರ್ಣ ಸರಪಳಿಯನ್ನು ಒಂದೇ ವೇದಿಕೆಯಲ್ಲಿ ಪ್ರದರ್ಶಿಸಲಾಗುತ್ತದೆ. 100ಕ್ಕೂ ಅಧಿಕ ರಾಷ್ಟ್ರಗಳ ಪ್ರದರ್ಶಕರು, ಹೂಡಿಕೆದಾರರು, ಕೈಗಾರಿಕೆಗಳು, ನೀತಿ ನಿರೂಪಕರು, ವೃತ್ತಿಪರರು ಭಾಗಿಯಾಗಲಿದ್ದಾರೆ. ಪ್ಲಾಸ್ಟಿಕ್ ಮಷಿನರಿ, ಉತ್ಪನ್ನಗಳು, ಕಚ್ಚಾವಸ್ತುಗಳು, ಉದ್ಯಮಗಳಿಗೆ ಜಾಗತಿಕ ಮಾರುಕಟ್ಟೆ ಒದಗಿಸುವುದು, ಸುಸ್ಥಿರತೆ ಮತ್ತು ಮರುಬಳಕೆ ಸಮಾವೇಶದ ಮುಖ್ಯ ಉದ್ದೇಶವಾಗಿದೆ ಎಂದು ಸಂಘದ ಅಧ್ಯಕ್ಷ ಜಯೇಶ್ ಖಿಮ್ಮಿ ರಂಭೀಯಾ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪ್ಲಾಸ್ಟಿಕ್ ಉದ್ಯಮವು ದೇಶದ ಜಿಡಿಪಿಗೆ ಶೇ.2.5 ಕೊಡುಗೆ ನೀಡುತ್ತಿದೆ. ಉದ್ಯಮ ಸವಾಲುಗಳು, ಅವಕಾಶ ಮತ್ತು ಭವಿಷ್ಯದ ತಂತ್ರಗಳ ಕುರಿತು ಪ್ಲಾಸ್ಟಿಕ್ ಉದ್ಯಮದ ಪರಿಣಿತರು ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಲಿದ್ದಾರೆ. ಕೃತಕಬುದ್ಧಿಮತ್ತೆ (ಎಐ) ಬಳಕೆ ಕುರಿತು ಚರ್ಚೆ ನಡೆಸಲಾಗುವುದು ಎಂದು ಜಯೇಶ್ ಖಿಮ್ಮಿ ರಂಭೀಯಾ ಹೇಳಿದರು. ಎಐಪಿಎಂಎ(ದಕ್ಷಿಣ) ಉಪಾಧ್ಯಕ್ಷ ರೋಹಿತ್ ಕನೂಗಾ ಇದ್ದರು.
ಕರ್ನಾಟಕದಲ್ಲಿ ಪಾಲಿಮರ್ ಮತ್ತು ಪ್ಲಾಸ್ಟಿಕ್ ಉದ್ಯಮ ವೇಗವಾಗಿ ಬೆಳೆಯುತ್ತಿದೆ. ಇಲ್ಲಿಂದ ದೇಶಕ್ಕೆ ಗಣನೀಯ ಪ್ರಮಾಣದಲ್ಲಿ ಪ್ಲಾಸ್ಟಿಕ್ ಪೂರೈಕೆಯಾಗುತ್ತಿದೆ. ಅಂದಾಜು 800 ನೋಂದಾಯಿತ ಕೈಗಾರಿಕೆಗಳಿದ್ದು, ಪರಿಸರಕ್ಕೆ ಧಕ್ಕೆಯಾಗದಂತೆ ಕಾರ್ಯನಿರ್ವಹಿಸುತ್ತಿವೆ. ರಾಜ್ಯದಲ್ಲಿ ಏಕಬಳಕೆ ಪ್ಲಾಸ್ಟಿಕ್ ನಿಷೇಧ ಹಿನ್ನೆಲೆಯಲ್ಲಿ ಬಯೋ ಪಾಲಿಮರ್ ಮತ್ತು ಪರ್ಯಾಯ ಪ್ಲಾಸ್ಟಿಕ್ ಉತ್ಪಾದಿಸಲಾಗುತ್ತಿದೆ.
ವಿಜಯ್ ಕುಮಾರ್, ಕರ್ನಾಟಕ ರಾಜ್ಯ ಪಾಲಿಮರ್ ಅಸೋಸಿಯೇಷನ್ ಅಧ್ಯಕ್ಷ