ನವದೆಹಲಿ: ಕರೊನಾ ಸೋಂಕಿನಿಂದ ಗುಣಮುಖರಾದವರ ದೇಹದಲ್ಲಿ ಇರುವ ಪ್ಲಾಸ್ಮಾ ಕಣಗಳನ್ನು ಸೋಂಕಿತರ ದೇಹದೊಳಕ್ಕೆ ಸೇರಿಸಿ ಚಿಕಿತ್ಸೆ ನೀಡುವ ಪ್ಲಾಸ್ಮಾ ಥೆರಪಿ ಈಗ ಎಲ್ಲೆಡೆ ಪ್ರಸಿದ್ಧವಾಗುತ್ತಿದೆ.
ಇದರ ಬೆನ್ನಲ್ಲೇ ದೇಶದ ಮೊದಲ 'ಪ್ಲಾಸ್ಮಾ ಬ್ಯಾಂಕ್'ಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಚಾಲನೆ ನೀಡಿದ್ದರು. ಪ್ಲಾಸ್ಮಾ ದಾನಿಗಳು ಈ ಬ್ಯಾಂಕ್‌ನಲ್ಲಿ ತಮ್ಮ ಪ್ಲಾಸ್ಮಾ ದಾನ ಮಾಡುವ ಮೂಲಕ ಇತರ ಸೋಂಕಿತರಿಗೆ ನೆರವಾಗಿ ಎಂದೂ ಅವರು ಕೋರಿದ್ದರು. ಈ ಹಿನ್ನೆಲೆಯಲ್ಲಿ, ಕರೊನಾ ಸೋಂಕಿತರಿಗೆ ಇದೊಂದು ವರದಾನ ಎಂದೇ ಭಾವಿಸಲಾಗಿತ್ತು.
ಆದರೆ ಇದೀಗ ಸ್ಫೋಟಕ ಮಾಹಿತಿಯೊಂದು ಬಹಿರಂಗಗೊಂಡಿದೆ. ಪ್ಲಾಸ್ಮಾ ಹೆಸರಿನ ಬೃಹತ್ ಮಾಫಿಯಾ ಶುರುವಾಗಿದ್ದು, ಕೆಲವು ಆಸ್ಪತ್ರೆಗಳೂ ಇದಕ್ಕೆ ಕೈಜೋಡಿಸಿವೆ. ಈ ಮೂಲಕ ಪ್ಲಾಸ್ಮಾ ಅಗತ್ಯ ಇರುವವರಿಂದ ಲಕ್ಷಾಂತರ ರೂಪಾಯಿ ಹಣ ಕೀಳುವ ದಂಧೆ ಶುರುವಾಗಿದೆ. ಇದರ ಸಲುವಾಗಿಯೇ ಏಜೆಂಟ್ಸ್ ಹುಟ್ಟಿಕೊಂಡಿದ್ದು, ಕೆಲವು ಆಸ್ಪತ್ರೆಗಳ ಜತೆ ಇವರು ಟೈ ಅಪ್ ಮಾಡಿಕೊಂಡಿದ್ದಾರೆ. ಅಲ್ಲಿಗೆ ಯಾರಾದರೂ ಸೋಂಕಿತರು ಹೋದರೆ ಅವರ ಬ್ಲಡ್ ಗ್ರೂಪ್‌ಗೆ ಸರಿಯಾಗಿರುವ ಪ್ಲಾಸ್ಮಾ ಇಲ್ಲವೆಂದು ಕಳಿಸಲಾಗುತ್ತಿದೆ. ದುಡ್ಡು ಖರ್ಚು ಮಾಡಲು ರೆಡಿ ಇದ್ದವರಿಗೆ ಪರೋಕ್ಷವಾಗಿ ಈ ಏಜೆಂಟ್‌ಗಳ ಮಾಹಿತಿ ನೀಡಲಾಗುತ್ತದೆ.
ಯಾವುದೇ ಮುಜುಗರವಿಲ್ಲದೇ ಈ ಏಜೆಂಟರು ಒಬ್ಬ ರೋಗಿಯಿಂದ 80 ಸಾವಿರದಿಂದ 2-3 ಲಕ್ಷದವರೆಗೂ ಹಣ ವಸೂಲಿ ಮಾಡಿ ಪ್ಲಾಸ್ಮಾ ನೀಡುತ್ತಿದ್ದಾರೆ.
ಈ ಕುರಿತು ಇಂಗ್ಲಿಷ್ ಚಾನೆಲ್ ಒಂದು ಸ್ಟಿಂಗ್ ಆಪರೇಷನ್ ಮೂಲಕ ಬೃಹತ್ ಜಾಲವನ್ನು ಹೊರಕ್ಕೆ ತಂದಿದೆ. ಈ ರೀತಿ ಕಳ್ಳ ದಂಧೆಯ ಮೂಲಕ ಪ್ಲಾಸ್ಮಾ ನೀಡಿದರೆ ಯಾರಿಗೂ ಗೊತ್ತಾಗುವುದಿಲ್ಲವೆ? ಆಸ್ಪತ್ರೆಯವರು ಏನು ಹೇಳುತ್ತಾರೆ ಎಂದು ಏಜೆಂಟ್ ಒಬ್ಬನನ್ನು ಪ್ರಶ್ನಿಸಿದಾಗ, ಯಾವ ಯಾವ ಆಸ್ಪತ್ರೆಗಳಲ್ಲಿ ಈ ರೀತಿ ಸೌಲಭ್ಯವಿದೆ ಎಂಬುದನ್ನು ಏಜೆಂಟ್ ಹೇಳುತ್ತಾನೆ. ಅಷ್ಟೇ ಅಲ್ಲದೇ ಈ ಬಗ್ಗೆ ಆಸ್ಪತ್ರೆಗೂ ತಿಳಿದಿರುವುದಾಗಿ ಹೇಳುವ ಆಡಿಯೋ ರಿಕಾರ್ಡ್ ಮಾಡಲಾಗಿದೆ.
ಸಾಲದು ಎಂಬುದಕ್ಕೆ ಇನ್ನಷ್ಟು ಲಕ್ಷ ಲಕ್ಷ ಹಣ ಕೊಟ್ಟರೆ ಪ್ಲಾಸ್ಮಾದ ಹೋಂ ಡೆಲಿವರಿ ಕೂಡ ಈ ಏಜೆಂಟರು ಮಾಡುತ್ತಿದ್ದಾರೆ. ಇದಾಗಲೇ ತಾವು ದೆಹಲಿಯ ಹೊರಗಡೆಯೂ ಈ ಪ್ಲಾಸ್ಮಾ ಡೆಲಿವರಿ ಮಾಡಿರುವುದಾಗಿ ಕೆಲವು ಏಜೆಂಟರು ಹೇಳಿಕೊಂಡಿದ್ದಾರೆ.
ಅದೇ ಇನ್ನೊಂದೆಡೆ ಸೋಂಕಿತರು ಪ್ಲಾಸ್ಮಾ ಚಿಕಿತ್ಸೆಗೆ ಆಸ್ಪತ್ರೆಗಳನ್ನು ಕೋರಿಕೊಂಡರೆ ಅವರಿಗೆ ಚಿಕಿತ್ಸೆಯೇ ಸಿಗುತ್ತಿಲ್ಲ, ಕಾರಣ, ಅವರ ಬ್ಲಡ್ ಗ್ರೂಪ್‌ನ ಡೋನರ್ ಎಲ್ಲೂ ಸಿಗುತ್ತಿಲ್ಲ ಎನ್ನುತ್ತಿವೆ ಆಸ್ಪತ್ರೆಗಳು.
ಏನಿದು ಪ್ಲಾಸ್ಮಾ ಥೆರಪಿ: ಪ್ಲಾಸ್ಮಾ ಥೆರಪಿ ಹಾಗೂ ದಾನದ ಕುರಿತಾಗಿ ವೈದ್ಯರು ಹೇಳಿರುವುದು ಹೀಗೆ: ‘ಮನುಷ್ಯರ ದೇಹದಲ್ಲಿ ದೇಹನಿರೋಧಕ ಶಕ್ತಿ ಹೆಚ್ಚಿಗೆ ಇದ್ದಷ್ಟು ಯಾವುದೇ ವೈರಸ್‌ಗಳು ಸುಲಭದಲ್ಲಿ ಅಟ್ಯಾಕ್ ಮಾಡುವುದಿಲ್ಲ. ಕರೊನಾ ವೈರಸ್ ಕೂಡ ಇದರಿಂದ ಹೊರತಾಗಿಲ್ಲ. ರೋಗವನ್ನು ಉಂಟು ಮಾಡುವ ವೈರಸ್‌ಗಳ ವಿರುದ್ಧ ಹೋರಾಡಲು ದೇಹವು ಪ್ರತಿರೋಧಕ ಗುಣಗಳನ್ನು ಬೆಳೆಸಿಕೊಂಡಿರುತ್ತವೆ. ಕರೊನಾ ವೈರಸ್‌ನಿಂದ ಗುಣಮುಖರಾದವರ ದೇಹದಲ್ಲೂ ಇಂತಹ ಪ್ರತಿರೋಧ ಕಣಗಳು ಅಭಿವೃದ್ಧಿಯಾಗಿರುತ್ತವೆ. ಇವು ರಕ್ತದ ದುಗ್ಧರಸದಲ್ಲಿ (ರಕ್ತದಲ್ಲಿರುವ ಪಾರದರ್ಶಕ ದ್ರವ) ಇರುತ್ತವೆ.
ಅಂಥ ವ್ಯಕ್ತಿಗಳ ದುಗ್ಧರಸದಲ್ಲಿ ಇರುವ ಪ್ರತಿರೋಧ ಕಣಗಳನ್ನು ತೆಗೆದು, ಅದನ್ನು ಸೋಂಕಿತರ ರಕ್ತಕ್ಕೆ ಸೇರಿಸಲಾಗುತ್ತದೆ. ಸೋಂಕಿನಿಂದ ಗುಣಮುಖನಾದ ಒಬ್ಬ ವ್ಯಕ್ತಿಯಿಂದ ಎರಡು ಡೋಸ್‌ನಷ್ಟು ಪ್ರತಿರೋಧ ಕಣಗಳನ್ನು ತೆಗೆಯಲು ಅವಕಾಶವಿದೆ. ಒಬ್ಬ ರೋಗಿಗೆ ಒಂದು ಡೋಸ್ ಸಾಕಾಗುತ್ತದೆ. ಹೀಗಾಗಿ ಗುಣಮುಖರಾದವರು ಒಬ್ಬರೇ ಇಬ್ಬರು ಸೋಂಕಿತರಿಗೆ ಪ್ರತಿರೋಧ ಕಣಗಳನ್ನು ನೀಡಿ ಅವರಿಬ್ಬರನ್ನು ಗುಣಪಡಿಸಬಹುದಾಗಿದೆ.