ನ್ಯೂಸ್

ಶ್ರಾವಣಕ್ಕಿಲ್ಲದ ಕಾಶಿ ಯಾತ್ರೆ!; ಭಾರತ್ ಗೌರವ್ ಯೋಜನೆಯಡಿ ಅವಕಾಶ, ಸಿದ್ಧವಾಗದ ರೂಪುರೇಷೆ

Webdesk - Ravikanth

| ಪಂಕಜ ಕೆ.ಎಂ. ಬೆಂಗಳೂರು

ಕೇಂದ್ರ ಸರ್ಕಾರದ ‘ಭಾರತ್ ಗೌರವ್’ ಯೋಜನೆಯಲ್ಲಿ ಶ್ರಾವಣ ಮಾಸದ ಕೊನೆಯ ವಾರ ರಾಜ್ಯದ ಜನರಿಗೆ ಕಾಶಿ ಯಾತ್ರೆ ಕೈಗೊಳ್ಳುವ ಅವಕಾಶ ಕಲ್ಪಿಸುವುದಾಗಿ ಮುಜರಾಯಿ ಇಲಾಖೆ ಹೇಳಿತ್ತು. ಆದರೆ, ಶ್ರಾವಣ ಮಾಸ ಮುಗಿದರೂ, ಇನ್ನೂ ಯೋಜನೆಯ ರೂಪುರೇಷೆ ಸಿದ್ಧಗೊಂಡಿಲ್ಲ. ರಾಜ್ಯದಿಂದ ಕಾಶಿ ಯಾತ್ರೆ ಕೈಗೊಳ್ಳಲು ಬೆಂಗಳೂರಿನ ಬೈಯ್ಯಪ್ಪನಹಳ್ಳಿಯ ಸರ್.ಎಂ. ವಿಶ್ವೇಶ್ವರಯ್ಯ ರೈಲು ನಿಲ್ದಾಣದಲ್ಲಿ ಕಾಯ್ದಿರಿಸಲಾಗಿರುವ ರೈಲಿನ ಪರಿಶೀಲನೆ ನಡೆಸಿದ್ದ ಮುಜರಾಯಿ ಖಾತೆ ಸಚಿವರು, ಶ್ರಾವಣ ಮಾಸದ ಕೊನೆಯ ವಾರದಲ್ಲಿ ಯಾತ್ರೆಗೆ ಚಾಲನೆ ನೀಡುವುದಾಗಿ ಹೇಳಿದ್ದರು. ಇದಾಗಿ ಒಂದೂವರೆ ತಿಂಗಳು ಕಳೆದರೂ ಯಾವುದೇ ಬೆಳವಣಿಗೆ ಕಂಡು ಬಂದಿಲ್ಲ.

ಜೀವನದಲ್ಲಿ ಒಮ್ಮೆಯಾದರೂ ಕಾಶಿ ಯಾತ್ರೆ ಕೈಗೊಳ್ಳಬೇಕು ಎನ್ನುವುದು ಬಹುಪಾಲು ಭಕ್ತರ ಆಸೆಯಾಗಿರುತ್ತದೆ. ಅದನ್ನು ಪೂರೈಸಲು ಇದೊಂದು ಉತ್ತಮ ಯೋಜನೆಯಾಗಿದೆ. ಆದರೆ ಈವರೆಗೂ ರೈಲು ಸಜ್ಜಾಗಿರುವುದು ಹೊರತು ಪಡಿಸಿ, ಯಾವುದೇ ಬೆಳವಣಿಗೆ ಆಗಿಲ್ಲ. ಯಾತ್ರೆಗೆ ಟಿಕೆಟ್ ಬುಕ್ಕಿಂಗ್ ಕೂಡ ಪ್ರಾರಂಭಿಸಿಲ್ಲ. ಬದಲಿಗೆ ಯೋಜನೆಯ ರೂಪುರೇಷೆ ಕುರಿತು ಇನ್ನೂ ಚರ್ಚೆ ನಡೆಯುತ್ತಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಚರ್ಚೆ ಹಂತದಲ್ಲಿಯೇ ಇದೆ: ಯೋಜನೆ ಜಾರಿಯಾದರೆ ಕಾಶಿ ಯಾತ್ರಿಕರಿಗಾಗಿ ಭಾರತ್ ಗೌರವ್ ರೈಲು ಸೇವೆ ಒದಗಿಸುತ್ತಿರುವ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಲಿದೆ. ಅಲ್ಲದೆ, ಪುಣ್ಯ ಕ್ಷೇತ್ರಗಳಿಗೆ ಕಡಿಮೆ ಖರ್ಚಿನಲ್ಲಿ ಪ್ರವಾಸ ಕೈಗೊಳ್ಳಲು ಯಾತ್ರಾರ್ಥಿಗಳಿಗೆ ಅನುಕೂಲವಾಗಲಿದೆ. ರಿಯಾಯಿತಿ ದರದಲ್ಲಿ 7 ದಿನಗಳ ಪ್ರವಾಸ ಕಾರ್ಯಕ್ರಮ ಇದಾಗಿದೆ. ಈ ನಿಟ್ಟಿನಲ್ಲಿ ಮುಜರಾಯಿ ಇಲಾಖೆ ಒಂದು ಕೋಟಿ ರೂ. ಬ್ಯಾಂಕ್ ಗ್ಯಾರಂಟಿ ನೀಡಿ ಈಗಾಗಲೆ ರೈಲನ್ನು ಬಾಡಿಗೆಗೆ ಪಡೆದಿದೆ. ಆದರೆ, ಯಾತ್ರಾರ್ಥಿಗಳಿಗೆ ಆಹಾರ, ನೀರು, ವಸತಿ, ಸ್ಥಳೀಯ ಸಾರಿಗೆ ಮತ್ತು ಇತರ ಮೂಲಭೂತ ಸೌಕರ್ಯಗಳಿಗೆ ರೈಲ್ವೆ ಅಧೀನ ಸಂಸ್ಥೆ (ಐಆರ್​ಸಿಟಿಸಿ) ಜತೆಗೆ ಒಪ್ಪಂದ ಇನ್ನೂ ಚರ್ಚೆ ಹಂತದಲ್ಲಿಯೇ ಇದೆ.

ರೈಲಿನ ವೀಶೇಷ ವಿನ್ಯಾಸ: ಬೆಂಗಳೂರು-ವಾರಾಣಸಿ-ಅಯೋಧ್ಯೆ-ಪ್ರಯಾಗರಾಜ್-ಬೆಂಗಳೂರು ಈ ಮಾರ್ಗದಲ್ಲಿ ರೈಲು 7 ದಿನಗಳಲ್ಲಿ 4,161 ಕಿ.ಮೀ. ಕ್ರಮಿಸಲಿದೆ. 14 ಬೋಗಿಗಳನ್ನು ಒಳಗೊಂಡಿರುವ ಈ ರೈಲಿನಲ್ಲಿ, 11 ಬೋಗಿಗಳನ್ನು ಪ್ರಯಾಣಿಕರ ಪ್ರವಾಸಕ್ಕೆ ಸಿದ್ಧ ಮಾಡಲಾಗುತ್ತಿದೆ. 3 ಟಯರ್ ಎಸಿ ವ್ಯವಸ್ಥೆ ಇರಲಿದೆ. ಒಂದು ಬೋಗಿಯನ್ನು ದೇವಸ್ಥಾನವಾಗಿ ಪರಿವರ್ತಿಸಿ ಯಾತ್ರಾರ್ಥಿಗಳ ಭಜನೆಗೆ ಅವಕಾಶ ನೀಡಲಾಗುವುದು. ಅಲ್ಲದೆ, ರಾಜ್ಯದ ಪ್ರಮುಖ ದೇವಸ್ಥಾನಗಳನ್ನು ಬ್ರಾ್ಯಂಡಿಂಗ್ ಮಾಡುವ ಉದ್ದೇಶದಿಂದ 11 ಬೋಗಿಗಳ ಮೇಲೆ ರಾಜ್ಯದ ಪ್ರಮುಖ 11 ದೇವಸ್ಥಾನಗಳ ಮಾಹಿತಿ ಅಳವಡಿಸಲು ನಿರ್ಧರಿಸಲಾಗಿದೆ. 7 ದಿನಗಳ ಪ್ರವಾಸಕ್ಕೆ ಅಂದಾಜು 15 ಸಾವಿರ ರೂ. ವೆಚ್ಚವಾಗಲಿದ್ದು, ಇದರಲ್ಲಿ 5 ಸಾವಿರ ರೂ.ಗಳನ್ನು ಸಹಾಯಧನವನ್ನಾಗಿ ಸರ್ಕಾರದಿಂದ ನೀಡಲಾಗುವುದು. ಉಳಿದ 10,000 ರೂ.ಗಳನ್ನು ಯಾತ್ರಾರ್ಥಿಗಳು ಭರಿಸಬೇಕಿದೆ.

ಸಹಾಯಧನಕ್ಕೆ ಅರ್ಜಿ ಪರಿಶೀಲನೆ: ಪ್ರಸಕ್ತ ಸಾಲಿನಿಂದ ಕಾಶಿ ಯಾತ್ರಾರ್ತಿಗಳಿಗೆ ರಾಜ್ಯ ಮುಜರಾಯಿ ಇಲಾಖೆಯಿಂದ ತಲಾ 5 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುತ್ತಿದ್ದು, ಇದಕ್ಕಾಗಿ ಅರ್ಜಿಗಳ ಪರಿಶೀಲನೆ ನಡೆಯುತ್ತಿದೆ. ಏ.1ರಿಂದ ಜೂ.30ರವರೆಗೆ ಯಾತ್ರೆಗೆ ಹೋಗಿ ಬಂದವರು ಹಾಗೂ ಜು.1ರ ನಂತರ ಕಾಶಿ ಯಾತ್ರೆ ಮಾಡಿದವರು ದಾಖಲಾತಿ ಸಹಿತ ಅನ್​ಲೈನ್ ಮೂಲಕ ಸೇವಾ ಸಿಂಧು ಪೋರ್ಟಲ್​ನಲ್ಲಿ ಅರ್ಜಿ ಸಲ್ಲಿಸಬೇಕಿದೆ. ಸಹಾಯಧನಕ್ಕಾಗಿ ಈಗಾಗಲೆ ಆನ್​ಲೈನ್​ನಲ್ಲಿ ನಾಲ್ಕೂವರೆ ಸಾವಿರ ಹಾಗೂ ನೇರವಾಗಿ 700 ಸೇರಿ 5 ಸಾವಿರಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದ್ದು, ದಾಖಲಾತಿಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮುಜರಾಯಿ ಇಲಾಖೆ ಅಧಿಕಾರಿಗಳು ತಿಳಿಸಿದರು. ಸಹಾಯಧನ ಪಡೆಯಲು ಏ.1 ರಿಂದ 30ರವರೆಗೂ ಕಾಶಿ ಪ್ರಯಾಣ ಮಾಡಿದವರು, ಪ್ರಯಾಣದ ದಾಖಲಾತಿ (ಟಿಕೆಟ್)ಯೊಂದಿಗೆ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಪಡಿತರ ಚೀಟಿಯ ಪ್ರತಿ ಒದಗಿಸಬೇಕು. ಜು. 1ರ ನಂತರ ಕಾಶಿ ಯಾತ್ರೆ ಕೈಗೊಂಡವರು ವಾರಾಣಸಿಯ ಕರ್ನಾಟಕ ರಾಜ್ಯ ಛತ್ರದ ವ್ಯವಸ್ಥಾಪಕರಿಂದ ದೃಢೀಕರಣ ಪತ್ರ, ಪ್ರಯಾಣದ ದಾಖಲಾತಿ, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಪಡಿತರ ಚೀಟಿದ ಪ್ರತಿ ಸಲ್ಲಿಸಬೇಕು ಎಂದು ಮಾಹಿತಿ ನೀಡಿದರು. ಈ ಹಿಂದೆ ಮಾನಸ ಗಂಗ್ರೋತಿ ಹಾಗೂ ಚಾರ್​ಧಾಮ್ ಪ್ರವಾಸ ಕೈಗೊಂಡವರಿಗೆ ಮಾತ್ರ ಸಹಾಯಧನ ನೀಡಲಾಗುತ್ತಿತ್ತು. ಪ್ರಸಕ್ತ ಸಾಲಿನಿಂದ ಕಾಶಿ ಪ್ರಯಾಣ ಮಾಡಿದ ಬಂದ ವಾರ್ಷಿಕ 30 ಸಾವಿರ ಮಂದಿಗೆ ತಲಾ 5 ಸಾವಿರ ಸಹಾಯ ಧನ ನೀಡಲಾಗುತ್ತಿದೆ.