ನ್ಯೂಸ್

ಚೀನಾ ಸೇನೆ ಹಿನ್ನೆಲೆ ಇದ್ದರೂ ಅಮೆರಿಕದಲ್ಲಿ ಸಂಶೋಧನೆ; ಮಾಹಿತಿ ಬಚ್ಚಿಟ್ಟಿದ್ದಕ್ಕೆ ಮೂವರ ಬಂಧನ

ವಾಷಿಂಗ್ಟನ್​: ಚೀನಾದ ಪೀಪಲ್ಸ್​ ಲಿಬರೇಷನ್​ ಆರ್ಮಿಯಲ್ಲಿ (ಪಿಎಲ್​ಎ) ಕೆಲಸ ಮಾಡುತ್ತಿದ್ದರೂ ವಿದ್ಯಾರ್ಥಿಯ ಸೋಗಿನಲ್ಲಿ ಅಮೆರಿಕದಲ್ಲಿ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದ ಚೀನಾದ ಮೂವರು ಯುವಕರನ್ನು ಅಮೆರಿಕ ಬಂಧಿಸಿದೆ. ಇವರೆಲ್ಲರೂ ತಮ್ಮ ಹಿನ್ನೆಲೆಯ ಬಗೆಗಿನ ಸಂಪೂರ್ಣ ಮಾಹಿತಿ ಬಚ್ಚಿಟ್ಟು ಅಮೆರಿಕದಲ್ಲಿ ಸಂಶೋಧನೆಯಲ್ಲಿ ತೊಡಗಿದ್ದಕ್ಕಾಗಿ ಇವರನ್ನು ಬಂಧಿಸಲಾಗಿದೆ ಎಂದು ಅಮೆರಿಕದ ನ್ಯಾಯಾಂಗ ಇಲಾಖೆ ತಿಳಿಸಿದೆ.

ಇದುವರೆಗಿನ ತಪಾಸಣೆಯಲ್ಲಿ ಪಿಎಲ್​ಎ ಜತೆಗಿನ ಸಂಬಂಧವನ್ನು ಬಚ್ಚಿಟ್ಟು ನಾಲ್ವರು ವಿದ್ಯಾರ್ಥಿಗಳ ಸೋಗಿನಲ್ಲಿ ಸಂಶೋಧನೆಯಲ್ಲಿ ತೊಡಗಿರುವುದು ಪತ್ತೆಯಾಗಿದೆ. ಇವರಲ್ಲಿ ಮೂವರನ್ನು ಬಂಧಿಸಲಾಗಿದ್ದು, ಮತ್ತೊಬ್ಬಾತ ಅಮೆರಿಕದಲ್ಲಿನ ಚೀನಾ ರಾಯಭಾರ ಕಚೇರಿಯಲ್ಲಿ ಆಶ್ರಯ ಪಡೆದುಕೊಂಡಿದ್ದಾನೆ. ಹಾಗಾಗಿ ಆತನನ್ನು ಬಂಧಿಸಲು ಸಾಧ್ಯವಾಗಿಲ್ಲ ಎಂದು ಎಫ್​ಬಿಐ ಅಧಿಕಾರಿಗಳು ಹೇಳಿದ್ದಾರೆ.

ಈ ಬಂಧನಗಳ ಜತೆಗೆ ಎಫ್​ಬಿಐ ಸಂಶೋಧನೆಯ ವೀಸಾ ಪಡೆದು ಅಮೆರಿಕಕ್ಕೆ ಬಂದು 25 ನಗರಗಳಲ್ಲಿ ವಾಸವಾಗಿರುವ ಚೀನಾ ಮೂಲದವರನ್ನು ಆಮೂಲಾಗ್ರವಾಗಿ ವಿಚಾರಣೆಗೆ ಒಳಪಡಿಸಿದೆ. ಇವರೆಲ್ಲರೂ ಚೀನಾದ ಪಿಎಲ್​ಎಯಲ್ಲಿ ಕೆಲಸ ಮಾಡುತ್ತಿದ್ದು, ತಮ್ಮ ನಿಜ ಹಿನ್ನೆಲೆಯಲ್ಲಿ ಬಚ್ಚಿಟ್ಟು, ಸಂಶೋಧನೆಯ ವೀಸಾ ಪಡೆದು ಅಮೆರಿಕಕ್ಕೆ ಬಂದವರಾಗಿದ್ದಾರೆ ಎಂದು ರಾಷ್ಟ್ರೀಯ ಭದ್ರತೆಯ ಸಹಾಯಕ ಅಟಾರ್ನಿ ಜನರಲ್​ ಆಗಿರುವ ಜಾನ್​ ಸಿ ಡೆಮೆರ್ಸ್​ ಹೇಳಿದ್ದಾರೆ.

ನಮ್ಮ ಮುಕ್ತ ಸಮಾಜದ ಅವಕಾಶ ಬಳಸಿಕೊಂಡು ನಮ್ಮ ವಿರುದ್ಧವೇ ಕೆಲಸ ಮಾಡುವ ಚೀನಾ ಕಮ್ಯುನಿಸ್ಟ್​ ಪಾರ್ಟಿಯ ಹುನ್ನಾರ ಇದಾಗಿದೆ. ಆದ್ದರಿಂದ, ಎಫ್​ಬಿಐ ಸಹಾಯದಿಂದ ಈ ವಿಷಯವಾಗಿ ಮತ್ತಷ್ಟು ತನಿಖೆ ಮುಂದುವರಿಸಲಾಗುವುದು ಎಂದು ತಿಳಿಸಿದ್ದಾರೆ.