ನ್ಯೂಸ್

ಟ್ರಾಫಿಕ್​ ಬಗ್ಗೆ ಪಾಠ ಮಾಡುವ ಪೊಲೀಸ್​ ಇಲಾಖೆಗೆ ಮರುಪಾಠ ಮಾಡಿದ ನೆಟ್ಟಿಗರು!

ನವದೆಹಲಿ: ಪೊಲೀಸ್​ ಇಲಾಖೆಯ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಟ್ರಾಫಿಕ್​ ನಿಯಮಗಳ ಬಗ್ಗೆ ಅರಿವು ಮೂಡಿಸಲು ಸಾಕಷ್ಟು ಫೋಟೋ ಮತ್ತು ವಿಡಿಯೋಗಳನ್ನು ನಿತ್ಯವು ಪೋಸ್ಟ್​ ಮಾಡಲಾಗುತ್ತದೆ. ಆದರೆ, ನಿಯಮಗಳ ಬಗ್ಗೆ ಮಾತನಾಡುವ ಪೊಲೀಸರೇ ಟ್ರಾಫಿಕ್​ ನಿಯಮ ಉಲ್ಲಂಘಿಸುವುದು ಎಷ್ಟು ಸರಿ? ಇದಕ್ಕೆ ಸಾಕ್ಷಿಯಾಗಿ ತಾಜಾ ಫೋಟೋವೊಂದು ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದೆ.

ಇಬ್ಬರು ಮಹಿಳಾ ಪೊಲೀಸ್​ ಸಿಬ್ಬಂದಿ ಹೆಲ್ಮೆಟ್​ ಧರಿಸದೇ ಬೈಕ್​ ಚಲಾಯಿಸುತ್ತಿರುವ ಫೋಟೋ ಜಾಲತಾಣದಲ್ಲಿ ವೈರಲ್​ ಆಗಿದೆ ರಾಹುಲ್​ ಬರ್ಮನ್​ ಎಂಬ ಟ್ವಿಟರ್​ ಬಳಕೆದಾರ ಫೋಟೋವನ್ನು ಸೆರೆಹಿಡಿದು ತನ್ನ ಟ್ವಿಟರ್​ ಖಾತೆಯಲ್ಲಿ ಪೋಸ್ಟ್​ ಮಾಡಿಕೊಂಡಿದ್ದಾನೆ.

ಮುಂಬೈ ಪೊಲೀಸ್​ ಪ್ರತಿಕ್ರಿಯೆ

ಬೈಕ್​ ನಂಬರ್​ ನಮೂದಿಸಿರುವ ಬಳಕೆದಾರ, ನಾವು ಈ ರೀತಿನ ಬೈಕ್​ ಚಲಾಯಿಸಿದರೆ ಏನಾಗುತ್ತೆ? ಇದು ಸಂಚಾರಿ ನಿಯಮ ಉಲ್ಲಂಘನೆಯಲ್ಲವೇ? ಎಂದು ರಾಹುಲ್​ ಬರ್ಮನ್​ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮುಂಬೈ ಟ್ರಾಫಿಕ್​ ಪೊಲೀಸ್​ ಇಲಾಖೆ, ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಈ ಫೋಟೋವನ್ನು ಮಾತುಂಗ ಸಂಚಾರಿ ಪೊಲೀಸ್​ ವಿಭಾಗದ ಹಿರಿಯ ಅಧಿಕಾರಿಗಳಿಗೆ ಕಳುಹಿಸಿದ್ದೇವೆ ಎಂದಿದೆ.

ಡಾ ಬಾಕ್ಸರ್​ ಹೆಸರಿನ ಮತ್ತೊಬ್ಬ ಟ್ವಿಟರ್​ ಬಳಕೆದಾರ ಪೊಲೀಸ್​ ಅಧಿಕಾರಿಯೊಬ್ಬರು ಹೆಲ್ಮೆಟ್​ ಇಲ್ಲದೇ ಬೈಕ್​ ಚಲಾಯಿಸುತ್ತಿರುವ ಫೋಟೋವನ್ನು ಪೋಸ್ಟ್​ ಮಾಡಿ, ಎರಡು ದಿನಗಳ ಹಿಂದಷ್ಟೇ ಪೂರ್ವ ಮುಂಬೈನ ಗೋರೆಗಾಂವ್ ಪ್ರದೇಶದ ಸುಬೆರಾಯ್ ಮಾಲ್ ರಸ್ತೆಯಲ್ಲಿ ಈ ಫೋಟೋವನ್ನು ಸೆರೆಹಿಡಿದೆ ಎಂದು ಬರೆದುಕೊಂಡಿದ್ದಾರೆ.

ನೆಟ್ಟಿಗರಿಂದ ಪಾಠ

ಪೊಲೀಸರ ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ನಾವು ಹೆಲ್ಮೆಟ್ ಇಲ್ಲದೆ ಸ್ಕೂಟರ್ ಓಡಿಸಿದರೆ, ನೋಂದಾಯಿತ ಮೊಬೈಲ್ ಸಂಖ್ಯೆಗೆ ಕೆಲವೇ ಗಂಟೆಗಳಲ್ಲಿ ನಾವು ದಂಡವನ್ನು ಚಲನ್​ ಅನ್ನು ಪಡೆಯುತ್ತೇವೆ. ಆದರೆ, ಇವರಿಗೆ ಮಾತ್ರ ನಿಯಮಗಳನು ಅನ್ವಯ ಆಗುವುದಿಲ್ಲ ಎಂದು ನೆಟ್ಟಿಗರೊಬ್ಬರು ಅಸಮಾಧಾನ ಹೊರಹಾಕಿದ್ದಾರೆ. ನಿಮ್ಮದೇ ಇಲಾಖೆಯಲ್ಲಿ ನಿಯಮ ಉಲ್ಲಂಘಿಸುವವರ ವಿರುದ್ಧ ಅಗತ್ಯ ಕ್ರಮ ತೆಗೆದುಕೊಂಡು ಸಮಾಜಕಕ್ಕೆ ಒಳ್ಳೆಯ ಉದಾಹರಣೆಯಾಗಿ ಎಂದು ಮತ್ತೊಬ್ಬ ನೆಟ್ಟಿಗ ಸಲಹೆ ನೀಡಿದ್ದಾರೆ. (ಏಜೆನ್ಸೀಸ್​)