ನ್ಯೂಸ್

ವೃದ್ಧನ ಮನೆಯನ್ನು ಹೊತ್ತು ಸಾಗಿದ ಗ್ರಾಮಸ್ಥರು! ಕಾರಣ ತಿಳಿದರೆ ಕಣ್ತುಂಬಿ ಬರುತ್ತದೆ

ಮನಿಲಾ: ಫಿಲಿಪ್ಪೈನ್ಸ್​ ರಾಷ್ಟ್ರದ ಗ್ರಾಮವೊಂದರಲ್ಲಿ ಮನಮುಟ್ಟುವ ಘಟನೆಯೊಂದು ನಡೆದಿದೆ. ಗ್ರಾಮದ ಸುಮಾರು 20 ಮಂದಿ ಒಟ್ಟಿಗೆ ಸೇರಿ ವೃದ್ಧನ ಮನೆಯನ್ನು ಹೊತ್ತು ಸಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಮನೆ ಸಾಗಾಟದ ಹಿಂದಿನ ಉದ್ದೇಶ ತಿಳಿದರೆ ನಿಮ್ಮ ಕಣ್ಣಂಚಲಿ ನೀರು ತುಂಬಿಕೊಂಡರು ಅಚ್ಚರಿಯೇನಿಲ್ಲ.

ಫಿಲಿಪ್ಪೈನ್ಸ್​ನ ಜಾಂಬೊಂಗಾ ಡೆಲ್​ ನಾರ್ತೆಯಲ್ಲಿ ಮಕ್ಕಳು ವಾಸವಿರುವ ಸಮೀಪಕ್ಕೆ ವೃದ್ಧನ ಮನೆಯನ್ನು ಗ್ರಾಮಸ್ಥರು ಸಾಗಿಸಿದ್ದಾರೆ. ವೃದ್ಧ ಪತ್ನಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಕೊನೆಯ ಕಾಲದಲ್ಲಿ ಮಕ್ಕಳ ಸಮೀಪ ಇರಬೇಕೆಂಬುದು ಅವರ ಬಯಕೆ ಆಗಿತ್ತು. ಇದಕ್ಕೆ ಒತ್ತಾಸೆಯಾಗಿ ನಿಂತ ಗ್ರಾಮಸ್ಥರು ವೃದ್ಧನ ಮನೆಯನ್ನು ಸ್ಥಳಾಂತರ ಮಾಡಿದ್ದಾರೆ.

ಸುಮಾರು 20 ಮಂದಿ ಒಟ್ಟಿಗೆ ಸೇರಿ 7 ಅಡಿ ಉದ್ದದ ಮನೆಯ ಅಡಿಗೆ ಬಿದಿರುಗಳನ್ನು ಇಟ್ಟು, ಹೊತ್ತುಕೊಂಡು ಹೋಗಿ ಮಕ್ಕಳ ಮನೆಯ ಸಮೀಪ ಇರಿಸಿದ್ದಾರೆ. ಇದೀಗ ವೃದ್ಧನ ಆಸೆ ಈಡೇರಿದೆ. ಸುಮಾರು 2 ಗಂಟೆಗಳ ಕಾಲ ನಡೆದು ವೃದ್ಧನನ್ನು ಆತನ ಮಕ್ಕಳ ಜೊತೆ ಸೇರಿಸಿದ್ದು, ಗ್ರಾಮಸ್ಥರ ಕೆಲಸವನ್ನು ಎಲ್ಲರು ಮೆಚ್ಚಿಕೊಂಡಿದ್ದಾರೆ.

ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು goodnews_movement ಹೆಸರಿನ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಅಪ್​ಲೋಡ್​ ಮಾಡಿದ್ದು, ಈವರೆಗೆ 2 ಲಕ್ಷಕ್ಕೂ ಅಧಿಕ ಲೈಕ್ಸ್​ ಪಡೆದುಕೊಂಡಿದೆ. (ಏಜೆನ್ಸೀಸ್​)