ನ್ಯೂಸ್

ಹಬ್ಬದ ಸಂಭ್ರದ ಜತೆಗೆ ಕೇಂದ್ರದಿಂದ ಬಂಪರ್​ ಗಿಫ್ಟ್​​​; ಶೀಘ್ರದಲ್ಲೇ ಪೆಟ್ರೋಲ್​​​-ಡೀಸೆಲ್​ ದರ ಇಳಿಕೆ! | Petrol Diesel price

ನವದೆಹಲಿ: ಮುಂಬರುವ ಅಕ್ಟೋಬರ್ ತಿಂಗಳಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ(Petrol Diesel price)ಗಳ ಇಳಿಕೆ ಕುರಿತು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಳ್ಳಲಿದೆ ಎಂಬ ವರದಿಗಳಿವೆ. ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಯಲ್ಲಿನ ಇಳಿಕೆ ಮತ್ತು ಭಾರತೀಯ ತೈಲ ಮಾರುಕಟ್ಟೆ ಕಂಪನಿಗಳ ಮಾರ್ಜಿನ್ ಹೆಚ್ಚಳವು ಇಂಧನ ಬೆಲೆ ಇಳಿಕೆಯ ಸೂಚಕವಾಗಿದೆ ಎಂದು ತಜ್ಞರು ಹೇಳುತ್ತಾರೆ. ದೀಪಾವಳಿ ಹಬ್ಬದ ಸಮಯದಲ್ಲಿ ಪೆಟ್ರೋಲ್, ಡೀಸೆಲ್ ಪ್ರತಿ ಲೀಟರ್​​ಗೆ ಎರಡರಿಂದ ಮೂರು ರೂಪಾಯಿ ಇಳಿಕೆಯಾಗಲಿದೆ ಎನ್ನಲಾಗಿದೆ.

ಅಕ್ಟೋಬರ್ 5ರ ನಂತರ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಕಡಿತವನ್ನು ಘೋಷಿಸುವ ಸಾಧ್ಯತೆಯಿದೆ. ಈ ವರ್ಷದ ಮಾರ್ಚ್‌ನಲ್ಲಿ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ USD 84 ಆಗಿತ್ತು, ಆದರೆ ಅದು ಸೆಪ್ಟೆಂಬರ್‌ನಲ್ಲಿ ಪ್ರತಿ ಬ್ಯಾರೆಲ್‌ಗೆ USD 74ಕ್ಕೆ ಇಳಿದಿದೆ. ಮುಂದಿನ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಲಿದೆ ಎಂದು CLSA ಹೇಳಿದೆ. ನವೆಂಬರ್‌ನಲ್ಲಿ ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ಇರುವುದರಿಂದ ಕೇಂದ್ರದ ಆಡಳಿತಾರೂಢ ಬಿಜೆಪಿ ಸರ್ಕಾರ ಈ ನಿರ್ಧಾರ ಕೈಗೊಳ್ಳಬಹುದು ಎಂದು ತಜ್ಞರ ಅಭಿಪ್ರಾಯವಾಗಿದೆ.

ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಗೆ ಹೋಲಿಕೆ ಮಾಡಿದರೆ ಸದ್ಯ ಲೀಟರ್ ಪೆಟ್ರೋಲ್ 15 ರೂಪಾಯಿ ಮತ್ತು ಡೀಸೆಲ್ ಬೆಲೆ 12 ರೂಪಾಯಿ ಹೆಚ್ಚಾಗಿದೆ. ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಲೀಟರ್‌ಗೆ 2 ಅಥವಾ 3 ರೂ.ಗಳಷ್ಟು ಕಡಿಮೆಯಾಗಬಹುದು ಎಂದು ICRA ಹಿರಿಯ ಉಪಾಧ್ಯಕ್ಷ ಗಿರೀಶ್‌ಕುಮಾರ್ ಕದಂ ಹೇಳಿದರು.

ಕಚ್ಚಾತೈಲ ದರ ಕಡಿಮೆಯಾಗಿರುವ ಕಾರಣ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಹೆಚ್ಚಳ ಮಾಡುವ ಬಗ್ಗೆ ಕೂಡ ಯೋಚಿಸಬಹುದು. ಈಗಾಗಲೇ ಕೇಂದ್ರ ಸರ್ಕಾರ ಪೆಟ್ರೋಲ್‌ಗೆ 19.8 ರೂಪಾಯಿ ಮತ್ತು ಡೀಸೆಲ್‌ಗೆ 15.8 ರೂಪಾಯಿ ಅಬಕಾರಿ ಸುಂಕ ವಿಧಿಸುತ್ತಿದೆ. ಕೇಂದ್ರ ಸರ್ಕಾರ ಈಗ ಅಬಕಾರಿ ಸುಂಕ ಒಂದು ರೂಪಾಯಿ ಹೆಚ್ಚಳ ಮಾಡಿದರೂ ವರ್ಷಕ್ಕೆ ಡೀಸೆಲ್‌ನಿಂದ 16,500 ಕೋಟಿ ರೂಪಾಯಿ ಮತ್ತು ಪೆಟ್ರೋಲ್‌ನಿಂದ 5,600 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ಗಳಿಸುವ ಸಾಧ್ಯತೆ ಇದ್ದು, ಬೆಲೆ ಕುಸಿತದ ಲಾಭವನ್ನು ಕೂಡ ಸರ್ಕಾರ ಪಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.(ಏಜೆನ್ಸೀಸ್​​)