ಪಟ್ನಾ: ಸನಾತನ ಧರ್ಮ ನಿರ್ಮೂಲನೆ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಆರೋಪದ ಮೇಲೆ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಹಾಗೂ ಅವರ ಪುತ್ರ, ಸಚಿವ ಉದಯನಿಧಿ ವಿರುದ್ಧ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ.
ಧಾರ್ಮಿಕ ಭಾನವೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ತಮಿಳುನಾಡು ಸಿಎಂ ಸ್ಟಾಲಿನ್ ಹಾಗು ಸಚಿವ ಉದಯನಿಧಿ ವಿರುದ್ಧ ವಕೀಲ ಸುಧೀರ್ ಕುಮಾರ್ ಓಜಾ ಎಂಬುವವರು ಬಿಹಾರದ ಮುಜಾಫರ್ಪುರ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಜಿಲ್ಲಾ ಮ್ಯಾಜಿಸ್ಟ್ರೇಟ್ ಪಂಕಜ್ ಕುಮಾರ್ ಲಾಲ್ ಅವರಿಗೆ ದೂರು ಸಲ್ಲಿಸಿದ ವಕೀಲ ಸುಧೀರ್ ಕುಮಾರ್ ತಮಿಳುನಾಡು ಸಿಎಂ ಸ್ಟಾಲಿನ್ ಹಾಗು ಸಚಿವ ಉದಯನಿಧಿ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ. ರಾಜಕೀಯ ನಾಯಕರು ಹಾಗೂ ಸೆಲೆಬ್ರಿಟಿಗಳ ವಿರುದ್ಧ ದಾವೆ ಹೂಡುವ ಮೂಲಕ ವಕೀಲ ಸುಧೀರ್ ಕುಮಾರ್ ಖ್ಯಾತಿ ಪಡೆದಿದ್ದಾರೆ.
ಇದನ್ನೂ ಓದಿ: ಸನಾತನ ಧರ್ಮದ ಕುರಿತು ಹೇಳಿಕೆ; ಬಿಜೆಪಿಯವರು ನನ್ನ ಮಾತನ್ನು ತಿರುಚಿ ವಿವಾದವನ್ನು ಹುಟ್ಟುಹಾಕಿದ್ದಾರೆ: ಉದಯನಿಧಿ ಸ್ಟಾಲಿನ್
ಡಿಎಂಕೆ ಯುವ ಘಟಕದ ಪ್ರದಾನ ಕಾರ್ಯದರ್ಶಿ ಹಾಗೂ ತಮಿಳುನಾಡು ಸರ್ಕಾರದಲ್ಲಿ ಕ್ರೀಡಾ ಸಚಿವರಾಗಿರುವ ಉದಯನಿಧಿ ಸ್ಟಾಲಿನ್ ಪ್ರಗತಿಪರ ಲೇಖಕರು ಹಾಗೂ ಕಲಾವಿದರು ಆಯೋಜನೆ ಮಾಡಿದ್ದ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಅವರು ಸನಾತನ ಧರ್ಮ ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ.
ಮಲೇರಿಯಾ, ಡೆಂಘೆ, ಕೋವಿಡ್ನಂತಹ ಸೋಂಕನ್ನು ವಿರೋದಿಸಬಾರದು ಬದಲಿಗೆ ಅವುಗಳನ್ನು ನಿರ್ಮೂಲನೆ ಮಾಡಬೇಕು. ಅದೇ ರೀತಿ ನಾವು ಸನಾತನ ಧರ್ಮವನ್ನು ವಿರೋಧಿಸುವ ಬದಲು ನಿರ್ಮೂಲನೆ ಮಾಡಬೇಕು ಎಂದು ಸಮಾವೇಶದಲ್ಲಿ ನೀಡಿದ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು ಮತ್ತು ಹೊಸ ವಿವಾದವನ್ನು ಹುಟ್ಟು ಹಾಕಿತ್ತು.