ಮುಂಬೈ: ಲೈಂಗಿಕ ಕಿರುಕುಳವನ್ನು ವಿರೋಧಿಸಿದ ಮಹಿಳೆಯೊಬ್ಬರನ್ನು ಲೋಕಲ್ ರೈಲಿನಿಂದ ಹೊರಕ್ಕೆ ತಳ್ಳಿದ 53 ವರ್ಷದ ಆರೋಪಿ, ಏನೂ ನಡೆದೇ ಇಲ್ಲ ಎಂಬಂತೆ ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ನಡೆದುಕೊಂಡು ಪರಾರಿಯಾಗುತ್ತಿರುವ ಸಿಸಿಟಿವಿ ದೃಶ್ಯ ಹೊರಬಿದ್ದಿದೆ. ಬಂಧಿತ ಆರೋಪಿಯನ್ನು ಜಿತೇಂದ್ರ ಹಿರ್ಮುಖೆ ಎಂದು ಗುರುತಿಸಲಾಗಿದೆ.
ಕೃತ್ಯ ಎಸಗಿದ ನಂತರ ಕೆಂಪು ಶರ್ಟ್ ಧರಿಸಿದ್ದ ಆರೋಪಿ ಜಿತೇಂದ್ರ ಪ್ಲಾಟ್‌ಫಾರ್ಮ್‌ನಲ್ಲಿ ಜನರ ನಡುವೆ ವೇಗವಾಗಿ ಸಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಮತ್ತೊಬ್ಬ ಪ್ರಯಾಣಿಕನೊಂದಿಗೆ ಸಂಕ್ಷಿಪ್ತವಾಗಿ ಮಾತನಾಡಿ ಎಡಕ್ಕೆ ತಿರುಗುವ ಆತ, ಕೆಲ ಕ್ಷಣಗಳ ಬಳಿಕ ಮರಳಿ ಕಾಣಿಸಿಕೊಂಡು, ಗಾಬರಿಯಿಂದ ಹಣೆ ಮುಟ್ಟಿಕೊಳ್ಳುತ್ತಾ ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಏನಿದು ಘಟನೆ?
ಬೊರಿವಲಿಯಿಂದ ವಿರಾರ್‌ಗೆ ಹೋಗುವ ಲೋಕಲ್ ರೈಲಿನಲ್ಲಿ ನೈಗಾಂವ್‌ಗೆ ಪ್ರಯಾಣಿಸುತ್ತಿದ್ದ ಮಹಿಳೆಗೆ ಆರೋಪಿ ಹಲವು ಬಾರಿ ಅನುಚಿತವಾಗಿ ಸ್ಪರ್ಶಿಸಿದ್ದಾನೆ. ನೈಗಾಂವ್ ನಿಲ್ದಾಣ ಸಮೀಪಿಸುತ್ತಿದ್ದಂತೆ ಆತ ಮತ್ತೆ ಕಿರುಕುಳ ನೀಡಲು ಶುರುಮಾಡಿದ್ದು, ಇದನ್ನು ಮಹಿಳೆ ಪ್ರಶ್ನಿಸಿದ್ದಾರೆ. ರೈಲಿನಿಂದ ಇಳಿದ ನಂತರವೂ ಆತ ತನ್ನ ವರ್ತನೆ ಮುಂದುವರಿಸಿದಾಗ, ‘ನಿನಗೆ ಮನೆಯಲ್ಲಿ ತಾಯಿ-ತಂಗಿಯರು ಇಲ್ಲವೇ?’ ಎಂದು ಮಹಿಳೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಘಟನೆಯಿಂದ ಆಕ್ರೋಶಗೊಂಡ ಮಹಿಳೆ ಆರೋಪಿಗೆ ಚಪ್ಪಲಿಯಿಂದ ಹೊಡೆದಿದ್ದು, ಪ್ರತಿಯಾಗಿ ಆರೋಪಿಯೂ ನಿಂದಿಸಿ ತನ್ನ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾನೆ. ನೈಗಾಂವ್ ರೈಲಿನವರೆಗೂ ಮುಂದುವರಿದ ಈ ಜಗಳದ ವೇಳೆ ಆರೋಪಿ ಮಹಿಳೆಯನ್ನು ರೈಲಿನಿಂದ ತಳ್ಳಿದ್ದು, ಅವರು ಎರಡು ಬೋಗಿಗಳ ನಡುವಿನ ಅಂತರಕ್ಕೆ ಬಿದ್ದಿದ್ದಾರೆ.
ಮಹಿಳೆ ಪ್ಲಾಟ್‌ಫಾರ್ಮ್ ಮೇಲೆ ಹತ್ತುವಷ್ಟರಲ್ಲೇ ರೈಲು ಚಲಿಸಿದ್ದರಿಂದ ಆಕೆಗೆ ಗಂಭೀರ ಗಾಯಗಳಾಗಿವೆ. ತಕ್ಷಣ ಪೊಲೀಸ್ ಅಧಿಕಾರಿ ಮತ್ತು ಸಹ ಪ್ರಯಾಣಿಕರು ಆಕೆಯನ್ನು ಮೇಲಕ್ಕೆ ಎಳೆದು ರಕ್ಷಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವಾಗ ಮಹಿಳೆಯ ಒಂದು ಕೈಯನ್ನು ಕತ್ತರಿಸಬೇಕಾಗಿ ಬಂದಿದ್ದು, ತಲೆಗೆ 16 ಹೊಲಿಗೆಗಳನ್ನು ಹಾಕಲಾಗಿದೆ.
ಒಂದೇ ಕೈಯಿಂದ ಏನೂ ಮಾಡಲು ಸಾಧ್ಯವಿಲ್ಲ, ನನಗೆ ನ್ಯಾಯ ಬೇಕು" ಎಂದು ಆಸ್ಪತ್ರೆಯಿಂದಲೇ ಸಂತ್ರಸ್ತೆ ಅಳಲು ತೋಡಿಕೊಂಡಿದ್ದಾರೆ. ಬಂಧಿತ ಆರೋಪಿಯ ವಿರುದ್ಧ ಕೊಲೆ ಯತ್ನ ಸೆಕ್ಷನ್ ಸೇರಿಸಬೇಕೆಂದು ಕುಟುಂಬಸ್ಥರು ಆಗ್ರಹಿಸಿದ್ದು, ಶೀಘ್ರ ಸೂಕ್ತ ಕಾನೂನು ಕ್ರಮದ ಭರವಸೆಯನ್ನು ಪೊಲೀಸರು ನೀಡಿದ್ದಾರೆ. (ಏಜೆನ್ಸೀಸ್)