ನ್ಯೂಸ್

ಮಹಿಳೆಗೆ ಕಿರುಕುಳ ಕೊಟ್ಟ ಯುವಕನನ್ನು ಹೊಡೆದು ಕೊಂದ ಜನ!

ಕಾಸರಗೋಡು: ಅಶ್ವಿನಿನಗರದ ಆಸ್ಪತ್ರೆ ವಠಾರದಲ್ಲಿ ಶನಿವಾರ ಗುಂಪೊಂದು ಚೆಮ್ನಾಡ್ ನಿವಾಸಿ ಮಹಮ್ಮದ್ ರಫೀಕ್(48) ಎಂಬುವನನ್ನು ಹಾಡಹಗಲೇ ಥಳಿಸಿ ಕೊಲೆ ಮಾಡಿದೆ.

ಮಗುವಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದ ಮಹಿಳೆಗೆ ರಫೀಕ್ ಕಿರುಕುಳ ನೀಡಿದ. ಇದನ್ನು ವಿರೋಧಿಸಿದ ಆಕೆ ಆತನನ್ನು ಪಕ್ಕಕ್ಕೆ ತಳ್ಳಿದ್ದರು. ಈ ವಿಚಾರವಾಗಿ ರಫೀಕ್ ಹಾಗೂ ತಂಡವೊಂದರ ನಡುವೆ ವಾಗ್ವಾದ ನಡೆದಿತ್ತು. ಇದಾದ ಕೆಲ ಹೊತ್ತಿನಲ್ಲೇ ಆಸ್ಪತ್ರೆ ವಠಾರದ ಮೆಡಿಕಲ್ ಶಾಪ್ ಬಳಿಗೆ ಬಂದ ತಂಡ ಮಹಮ್ಮದ್ ರಫೀಕ್‌ನನ್ನು ಯದ್ವಾತದ್ವಾ ಥಳಿಸಿದೆ. ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದ ರಫೀಕ್‌ನನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತಾದರೂ, ಅಷ್ಟರಲ್ಲೇ ಆತ ಮೃತಪಟ್ಟಿದ್ದ.

ಸಾವು ಹೇಗೆ ಸಂಭವಿಸಿತು ಎಂಬುದು ಮರಣೋತ್ತರ ಪರೀಕ್ಷೆ ವರದಿಯಿಂದಷ್ಟೇ ತಿಳಿಯಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಡಿವೈಎಸ್‌ಪಿ ಬಾಲಕೃಷ್ಣನ್ ನಾಯರ್ ನೇತೃತ್ವದ ತಂಡ ಸ್ಥಳಕ್ಕಾಗಮಿಸಿ, ಆರೋಪಿಗಳ ಪತ್ತೆಗೆ ಬಲೆ ಬೀಸಿದೆ.