ನ್ಯೂಸ್

ಅಧಿಕಾರಿಗಳಿಂದಾಗಿ ಪ್ರಾಣ ಕಳೆದುಕೊಂಡ ಸಂತ್ರಸ್ತ?; ಮನೆಹಾನಿ ಪರಿಹಾರ ಆಯ್ಕೆಯಲ್ಲಿ ತಾರತಮ್ಯ ಎಂದು ಆರೋಪಿಸಿ ಆತ್ಮಹತ್ಯೆ

ಧಾರವಾಡ: ಮನೆಹಾನಿ ಪರಿಹಾರ ಆಯ್ಕೆಯಲ್ಲಿ ಅಧಿಕಾರಿಗಳು ತಾರತಮ್ಯ ಎಸಗಿದ್ದಾರೆ ಎಂದು ಆರೋಪಿಸಿ ಸಂತ್ರಸ್ತ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ನಡೆದಿದೆ. ಅಧಿಕಾರಿಗಳ ನಡೆಗೆ ಮನನೊಂದ ವ್ಯಕ್ತಿ ನೇಣು ಹಾಕಿಕೊಂಡಿದ್ದಾರೆ.

ಧಾರವಾಡ ತಾಲೂಕಿನ ಮಾದನಬಾವಿ ಗ್ರಾಮದಲ್ಲಿ ಈ ಪ್ರಕರಣ ನಡೆದಿದ್ದು, ಭೀಮಪ್ಪ ಪಾಟೀಲ (60) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಕಳೆದ ತಿಂಗಳಲ್ಲಿ ಸುರಿದ ಭಾರಿ ಮಳೆಗೆ ಇವರ ಮನೆ ಬಿದ್ದು ಹಾನಿಗೊಳಗಾಗಿತ್ತು.

ಈ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದ್ದಾಗ ಹಾನಿಗೆ ಸಂಬಂಧಿಸಿದಂತೆ ಮನೆಯನ್ನು ಬಿ ಕೆಟಗರಿಗೆ ಸೇರಿಸಲಾಗಿತ್ತು. ಆದರೆ ನಿನ್ನೆ ಅಧಿಕಾರಿಗಳು ಇದ್ದಕ್ಕಿದ್ದಂತೆ ಅದನ್ನು ಸಿ ಕೆಟಗರಿಗೆ ಸೇರಿಸಿದ್ದರು. ಇದರಿಂದ ಮನನೊಂದ ಭೀಮಪ್ಪ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಆತ್ಮಹತ್ಯೆ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆಕ್ರೋಶಗೊಂಡು ಜಿಲ್ಲಾಸ್ಪತ್ರೆಯ ಶವಾಗಾರದ ಎದುರು ಪ್ರತಿಭಟನೆ ನಡೆಸಿದ್ದರು. ಬಳಿಕ ಸ್ಥಳಕ್ಕೆ ತಹಶೀಲ್ದಾರ್ ಸಂತೋಷ ಹಿರೇಮಠ ಭೇಟಿ ನೀಡಿ ಮಾತುಕತೆ ನಡೆಸಿದ ಬಳಿಕ ಪ್ರತಿಭಟನೆ ಹಿಂದೆಗೆದುಕೊಂಡರು. ಗರಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.