ಬ್ರೆಸಿಲಿಯಾ: ಮಗ ಸತ್ತಿದ್ದಾನೆ, ಅವನಿನ್ನು ಮರಳಿ ಬರುವ ಮಾತೇ ಇಲ್ಲ ಎಂದು ನಂಬಿ, 10 ವರ್ಷದಿಂದ ಮಗನ ನೆನಪಿನಲ್ಲೇ ಬದುಕುತ್ತಿದ್ದ ತಾಯಿಗೆ ಇತ್ತೀಚೆಗೆ ಆಶ್ಚರ್ಯವೊಂದು ಕಾದಿತ್ತು. 10 ವರ್ಷಗಳ ಹಿಂದೆಯೇ ಸತ್ತಿದ್ದ ಮಗ, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ.
ಬ್ರೆಜಿಲ್ನ 45 ವರ್ಷದ ಜೊನೊ ಕೊಯೆಲ್ಹೋ ಗುಯಿಮರೀಸ್ 10 ವರ್ಷಗಳ ಹಿಂದೆಯೇ ತನ್ನ ತಾಯಿ ಮತ್ತು ಮಗಳಿಂದ ದೂರ ಬಂದಿದ್ದಾನೆ. ತಾನು ಎಲ್ಲ ಬಂಧನಗಳಿಂದ ಮುಕ್ತವಾಗಿರಬೇಕು ಎನ್ನುವ ಸಿದ್ಧಾಂತವನ್ನಿಟ್ಟುಕೊಂಡು ಗೋಯಾನಿಯಾ ನಗರದಲ್ಲಿ ಒಬ್ಬಂಟಿ ಬದುಕು ಆರಂಭಿಸಿದ್ದಾನೆ. ಒಬ್ಬಂಟಿಯಾಗಿ ಬಹುತೇಕ ಭಿಕ್ಷುಕನ ರೀತಿಯಲ್ಲೇ ಜೀವನ ನಡೆಸಿದ್ದಾನೆ. ಇತ್ತ ಇದ್ದಕ್ಕಿದ್ದಂತೆ ಮಗ ಕಾಣೆಯಾಗಿದ್ದನ್ನು ಕಂಡು, ತಾಯಿ ಮತ್ತು ಮಗಳಿಬ್ಬರೂ ಆತ ಸತ್ತಿದ್ದಾನೆ ಎಂದೇ ನಂಬಿದ್ದಾರೆ. ಇದೇ ರೀತಿಯಲ್ಲಿ 10 ವರ್ಷಗಳು ಕಳೆದಿವೆ.
ಇತ್ತೀಚೆಗೆ ಜೊನೊಗೆ ಹೇರ್ಕಟ್ ಮಾಡಿಸಿಕೊಳ್ಳಬೇಕೆಂಬ ಆಸೆ ಹುಟ್ಟಿದೆ. ನಗರದ ಸೆಲಾನ್ ಒಂದಕ್ಕೆ ತೆರಳಿ ತನಗೆ ಹೇರ್ ಕಟ್ ಮಾಡಿಕೊಳ್ಳಲು ರೇಜರ್ ಕೊಡಿ ಎಂದು ಕೇಳಿಕೊಂಡಿದ್ದಾನೆ. ಅಡ್ಡಾದಿಡ್ಡಿ ಕೂದಲು ಮತ್ತು ಗಡ್ಡ ಬೆಳೆದಿದ್ದ ಜೊನೊಗೆ ರೇಜರ್ ಕೊಡುವ ಬದಲು, ತಾವೇ ಆತನನ್ನು ಬದಲಾಯಿಸುವ ನಿರ್ಧಾರವನ್ನು ಸೆಲಾನ್ ಅವರು ಮಾಡಿದ್ದಾರೆ. ಬರೋಬ್ಬರಿ ಎರಡು ಗಂಟೆಗಳ ಕಾಲ ಆತನ ಹೇರ್ ಕಟ್ ಮತ್ತು ಗಡ್ಡ ಟ್ರಿಮ್ ಮಾಡಿದ್ದು, ಉತ್ತಮವಾಗಿ ಕಾಣುವಂತೆ ಮಾಡಿದ್ದಾರೆ. ಕ್ರಿಸ್ಮಸ್ನ ಈ ಶುಭ ಸಮಯದಲ್ಲಿ ಈ ರೀತಿಯ ಉತ್ತಮ ಬದಲಾವಣೆ ಮಾಡಿದ್ದೇವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡಿದ್ದಾರೆ.
ಜೊನೊನ ಟ್ರಾನ್ಸ್ಫರ್ಮೇಶನ್ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದೆ. ಆತನ ತಾಯಿ ಮತ್ತು ಮಗಳೂ ಈ ಫೋಟೋವನ್ನು ನೋಡಿದ್ದು, ಆಶ್ಚರ್ಯದ ಜತೆ ತಡೆಯಲಾರದಷ್ಟು ಸಂತೋಷ ಪಟ್ಟಿದ್ದಾರೆ. ಸೆಲಾನ್ ಅವರಿಗೆ ಕರೆ ಮಾಡಿ, ಜೊನೊನನ್ನು ಸಂಪರ್ಕಿಸಲು ಮಾರ್ಗ ಕೇಳಿದ್ದಾರೆ. ಅವರ ಸಲಹೆಯ ಮೇರೆಗೆ ಆತನನ್ನು ಅವರಿಬ್ಬರು ಭೇಟಿಯಾಗಿದ್ದಾರೆ. ಆದರೆ ಜೊನೊ ವಾಪಾಸು ಮನೆಗೆ ತೆರಳಲು ಒಪ್ಪಿಲ್ಲ ಎನ್ನಲಾಗಿದೆ. ತಾನು ಸ್ವತಂತ್ರವಾಗಿಯೇ ಜೀವನವನ್ನು ಮುಂದುವರಿಸಲು ಇಚ್ಛಿಸಿರುವುದಾಗಿ ಆತ ಹೇಳಿದ್ದಾನೆ ಎನ್ನಲಾಗಿದೆ. (ಏಜೆನ್ಸೀಸ್)