ನ್ಯೂಸ್

'ಟಾಕ್ಸಿಕ್'​ ಹೀರೋ ರಾಕಿಂಗ್​ ಸ್ಟಾರ್​ಗೆ ಬಹುಪರಾಕ್​; ಯಶ್​​ ಹಾಡಿ ಹೊಗಳಿದ ಜೆ.ಜೆ. ಪೆರ್ರಿ | Yash Toxic

Yash Toxic: ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್​ ನಟ ಯಶ್​ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ 'ಟಾಕ್ಸಿಕ್'​ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಇನ್ನೇನು ಕೆಲವೇ ಕೆಲವು ಸೀನ್​ಗಳು ಮಾತ್ರ ಬಾಕಿ ಉಳಿದಿವೆ. ಕನ್ನಡ ಸೇರಿದಂತೆ ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳ ಸಿನಿಪ್ರಿಯರ ಕುತೂಹಲ, ಕೌತುಕವನ್ನು ದುಪ್ಪಟ್ಟು ಮಾಡಿರುವ ಯಶ್​, ಶೀಘ್ರವೇ ಬೆಳ್ಳಿಪರದೆಯ ಮೇಲೆ ರಾರಾಜಿಸುವುದಕ್ಕೆ ಸಜ್ಜಾಗುತ್ತಿದ್ದಾರೆ.

ಇನ್ನು ಚಿತ್ರಕ್ಕೆ ಹಾಲಿವುಡ್ ಸಾಹಸ ನಿರ್ದೇಶಕ ಜೆ.ಜೆ. ಪೆರ್ರಿ ಅವರು ಯಶ್​ಗೆ ಸಾಥ್ ನೀಡಿದ್ದು, ಸಿನಿಮಾದಲ್ಲಿ ಕೆಲವು ಸಾಹಸಮಯ ದೃಶ್ಯಗಳನ್ನು ಯಶ್​ ಅವರಿಂದ ಮಾಡಿಸಿದ್ದಾರೆ. ಪ್ಯಾನ್ ಇಂಡಿಯಾ ಸೂಪರ್​ಸ್ಟಾರ್​ ಯಶ್​ ಅಭಿನಯಕ್ಕೆ ಫಿದಾ ಆಗಿರುವ ಪೆರ್ರಿ, ಯಶ್​ರನ್ನು ಹಾಡಿ ಹೊಗಳಿದ್ದಾರೆ. ನಟನ ಫೋಟೋ ಜತೆಗೆ ತಮ್ಮ ಮನದಾಳದ ಮಾತನ್ನು ಮುಕ್ತವಾಗಿ ಜಾಲತಾಣದಲ್ಲಿ ಬರೆದುಕೊಂಡಿರುವ ನಿರ್ದೇಶಕರು, ಯಶ್​ರನ್ನು ಮೆಚ್ಚಿ ಮಾತನಾಡಿದ್ದಾರೆ.

"ಅವತಾರ್" ಮತ್ತು "ಎಫ್9" ಸೇರಿದಂತೆ ಬ್ಲಾಕ್‌ಬಸ್ಟರ್‌ ಹಾಲಿವುಡ್​ ಚಿತ್ರಗಳಿಗೆ ಸಾಹಸಮಯ ದೃಶ್ಯಗಳನ್ನು ಕೊಟ್ಟಿರುವ ಹೆಸರಾಂತ ನಿರ್ದೇಶಕ ಪೆರ್ರಿ, ಪ್ರಸ್ತುತ ನಿರ್ಮಾಣ ಹಂತದಲ್ಲಿರುವ "ಟಾಕ್ಸಿಕ್" ಚಿತ್ರಕ್ಕೆ ಸಾಹಸ ಸಂಯೋಜನೆ ಮಾಡಿದ್ದಾರೆ. ಗೀತು ಮೋಹನ್​ದಾಸ್​ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಸದ್ಯ ನಿರೀಕ್ಷೆಗಳು ಹೆಚ್ಚಾಗಿವೆ. "ಟಾಕ್ಸಿಕ್​ನಲ್ಲಿ ನನ್ನ ಸ್ನೇಹಿತ ಯಶ್​ ಜತೆಗೆ ಕೆಲಸ ಮಾಡಿದ್ದು ಭಾರೀ ಸಂತಸ ತಂದಿದೆ. ಯುರೋಪಿನಾದ್ಯಂತ ಹಲವು ಆತ್ಮೀಯ ಸ್ನೇಹಿತರೊಂದಿಗೆ ಕೆಲಸ ಮಾಡಲು ಅವಕಾಶ ಸಿಕ್ಕಿತು. ಟಾಕ್ಸಿಕ್​ ಒಂದು ಬ್ಯಾಂಗ್​ ಆಗೋ ಸಿನಿಮಾ. ನಾವೇನು ಮಾಡಿದ್ದೇವೋ ಅದರ ಬಗ್ಗೆ ಹೆಮ್ಮೆಯಿದೆ" ಎಂದು ಬರೆದುಕೊಂಡಿದ್ದಾರೆ.

ಗೀತು ಮೋಹನ್ ದಾಸ್ ಬರೆದು, ನಿರ್ದೇಶಿಸಿರುವ ಯಶ್ ನಟನೆಯ "ಟಾಕ್ಸಿಕ್" ಇಂಗ್ಲಿಷ್ ಮತ್ತು ಕನ್ನಡ ಎರಡರಲ್ಲೂ ಚಿತ್ರೀಕರಿಸಲಾಗುತ್ತಿದ್ದು, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಿಗೆ ಡಬ್ ಮಾಡಲಾಗುವುದು. ಚಿತ್ರದಲ್ಲಿ ಬಾಲಿವುಡ್​ ನಟಿ ಕಿಯಾರಾ ಅಡ್ವಾಣಿ, ತೆಲುಗು ನಟಿ ನಯನತಾರಾ ಮತ್ತು ತಾರಾ ಸುತಾರಿಯಾ ಸೇರಿದಂತೆ ಇನ್ನಿತರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ,(ಏಜೆನ್ಸೀಸ್).