ಸಂಸದರು, ವಿಧಾನಪರಿಷತ್, ವಿಧಾನಸಭೆ ಸದಸ್ಯರು ಹಾಗೂ ರಾಜ್ಯಪಾಲರ ಹೆಸರಿನಲ್ಲಿ ನೋಂದಣಿಯಾಗಿರುವ ದೂರವಾಣಿ ಸಂಖ್ಯೆಗಳ ‘ಕರೆ’ ಮಾಹಿತಿ ಪಡೆಯಲು ಅವಕಾಶ ಇಲ್ಲ. ಒಂದು ವೇಳೆ ತನಿಖಾ ದೃಷ್ಟಿಯಿಂದ ಅಗತ್ಯವೆನಿಸಿದಲ್ಲಿ ಸಿಐಡಿ ಡಿಜಿಪಿ ಪೂರ್ವಾನುಮತಿ ಕಡ್ಡಾಯಗೊಳಿಸಿ ಆದೇಶಿಸಲಾಗಿದೆ. ಅಪರಾಧ ಪ್ರಕರಣಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಹಾಗೂ ಆರೋಪಿತರ ಮೊಬೈಲ್ ‘ಕರೆ’ಗಳ ಸಿಡಿಆರ್, ಐಎಂಇಐ ಪತ್ತೆ ಹಾಗೂ ಟವರ್ ಡಂಪ್ ಮಾಹಿತಿಯನ್ನು ಸೇವಾದಾರ ಸಂಸ್ಥೆಗಳಿಂದ ಪಡೆಯುವ ಸಂದರ್ಭದಲ್ಲಿ ತನಿಖಾಧಿಕಾರಿಗಳು ಅನು ಸರಿಸಬೇಕಾದ ಮಾರ್ಗ ಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. ವೈಯಕ್ತಿಕ ಉದ್ದೇಶ ಹಾಗೂ ಅಕ್ರಮ ಲಾಭಕ್ಕಾಗಿ ಬಳಸಿಕೊಂಡಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ವಿಶ್ವಾಸದ್ರೋಹ ಕೇಸ್ ದಾಖಲಿಸುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಸಿಡಿಆರ್ ಮಾಹಿತಿ ದುರ್ಬಳಕೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮಾನದಂಡಗಳನ್ನು ರೂಪಿಸಿ ಆದೇಶಿಸಿದೆ.
ಮೊಬೈಲ್ ಲೊಕೇಷನ್, ಕರೆಗಳ ವಿವರ ಪಡೆಯಲು ಸಂಬಂಧಪಟ್ಟ ಘಟಕದ ಅಧಿಕಾರಿಗಳ ಅನುಮತಿ ಪಡೆಯಬೇಕು. ಮನವಿ ಪತ್ರ ಸಲ್ಲಿಸುವ ಮುನ್ನ ಕೋರಿರುವ ಮಾಹಿತಿಗಳು ಸೂಕ್ಷ್ಮ ಸ್ವರೂಪದ್ದಾಗಿಲ್ಲ. ಜತೆಗೆ ಕೋರಿರುವ ದೂರವಾಣಿ ಸಂಖ್ಯೆಗಳ ಮಾಹಿತಿಗಳು ಸಂಸದ, ವಿಧಾನಸಭೆ ಅಥವಾ ವಿಧಾನ ಪರಿಷತ್ ಸದಸ್ಯ ಹಾಗೂ ರಾಜ್ಯಪಾಲರ ಹೆಸರಿನಲ್ಲಿ ಇರದ ಮೊಬೈಲ್ ನಂಬರ್ಗಳಾಗಿರುತ್ತವೆ ಎಂಬುದನ್ನು ಖಚಿತಪಡಿಸಿಕೊಂಡು ನಂತರ ಪ್ರಸ್ತಾವನೆ ಸಲ್ಲಿಸಬೇಕು. ಒಂದು ವೇಳೆ ಕೋರಿರುವ ಮಾಹಿತಿಯು ಇವರ ಹೆಸರಿನಲ್ಲಿರುವ ದೂರವಾಣಿ ಸಂಖ್ಯೆಗಳಾಗಿದ್ದಲ್ಲಿ ಸಿಐಡಿ ಡಿಜಿಪಿ ಪೂರ್ವಾನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು ಎಂದು ಸೂಚಿಸಲಾಗಿದೆ.
ಆರೋಪಿಗಳು ಅಥವಾ ಸಂಶಯಾಸ್ಪದ ವ್ಯಕ್ತಿಗಳ ಮೊಬೈಲ್ ವಿವರಗಳನ್ನು ಪಡೆದ ನಂತರ ಅದನ್ನು ವೈಯಕ್ತಿಕ ಉದ್ದೇಶಕ್ಕಾಗಿ ಬಳಸುವುದು ಅಥವಾ ತನಿಖೆಗೆ ಅಗತ್ಯವಿಲ್ಲದ ಮಾಹಿತಿ ಪಡೆದುಕೊಂಡರೆ ಅದನ್ನು ಉದ್ದೇಶಪೂರ್ವಕ ಕರ್ತವ್ಯಲೋಪವೆಂದು ಪರಿಗಣಿಸಲಾಗುವುದು. ಸರ್ವೀಸ್ ಪೊ›ವೈಡರ್ಗಳಿಂದ ಪಡೆದ ಮಾಹಿತಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವವರೆಗೂ ಗೌಪ್ಯತೆ ಕಾಪಾಡಿಕೊಳ್ಳಬೇಕು. ನ್ಯಾಯಾಲಯಕ್ಕೆ ಹಾಗೂ ಮೇಲಧಿಕಾರಿಗಳಿಗೆ ಹೊರತುಪಡಿಸಿ ಯಾವುದೇ ವ್ಯಕ್ತಿಗೆ ಹಂಚಿಕೊಳ್ಳುವಂತಿಲ್ಲ. ಒಂದು ವೇಳೆ ಮಾಹಿತಿಯನ್ನು ಇತರರಿಗೆ ಹಂಚಿಕೊಂಡರೆ ಅಪರಾಧಿಕ ವಿಶ್ವಾಸದ್ರೋಹ ಮತ್ತು ದುರುಪಯೋಗ ಎಂದು ಪರಿಗಣಿಸಲಾಗುವುದು. ಜತೆಗೆ ಕಲಂ 72 ಮಾಹಿತಿ ತಂತ್ರಜ್ಞಾನ ಅಧಿನಿಯಮ 2000 ಅನ್ವಯ ಹಾಗೂ ಟೆಲಿಕಮ್ಯುನಿಕೇಶನ್ಸ್ ಕಾಯ್ದೆಯಡಿ ಅಪರಾಧಿಕ ಕೃತ್ಯ ಎಸಗಿದ್ದಾನೆಂದು ಪರಿಗಣಿಸಿ ಪ್ರಕರಣ ದಾಖಲಿಸುವುದಾಗಿ ಆದೇಶದಲ್ಲಿ ಎಚ್ಚರಿಕೆ ಕೊಡಲಾಗಿದೆ.
ಸಿಐಡಿಯಲ್ಲಿ ನಡೆಯುವ ವಿಚಾರಣೆ, ಪಿಟಿಷನ್ ಅಥವಾ ಎಫ್ಐಆರ್ ದಾಖಲಾಗದ ಪ್ರಕರಣಗಳಲ್ಲಿ ಮೊಬೈಲ್ ವಿವರಗಳನ್ನು ಪಡೆಯುವುದು ಅಗತ್ಯವೆನಿಸಿದರೆ ಡಿಜಿಪಿಯಿಂದ ಅನುಮೋದನೆ ಸಿಕ್ಕ ನಂತರವೇ ಸರ್ವೀಸ್ ಪ್ರೊವೈಡರ್ಗಳಿಂದ ಕರೆಗಳ ಮಾಹಿತಿ ಪಡೆಯಲು ಅವಕಾಶ ಇರುತ್ತದೆ. ಸ್ವೀಕರಿಸುವ ಮಾಹಿತಿಗಳನ್ನು ಘಟಕದ ಅಧೀಕ್ಷಕರ ಇ-ಮೇಲ್ ಐಡಿಗೆ ಕಳುಹಿಸಬೇಕು. ಘಟಕಾಧಿಕಾರಿ ಮೂಲಕ ತನಿಖಾಧಿಕಾರಿಗಳಿಗೆ ಮಾಹಿತಿ ಕೊಡಬೇಕು.
ಅನುಮತಿ ಕೋರಿ ಸಲ್ಲಿಕೆಯಾಗುವ ಮನವಿಪತ್ರಗಳನ್ನು ಸ್ವೀಕರಿಸಿದ ಆಯಾ ವಿಭಾಗದ ಅಧೀಕ್ಷಕರು ಅವುಗಳನ್ನು ಪರಿಶೀಲಿಸಿ, ತನಿಖಾಧಿಕಾರಿಗಳೊಂದಿಗೆ ರ್ಚಚಿಸಿ, ಸದರಿ ಮಾಹಿತಿ ಪಡೆದುಕೊಳ್ಳುವುದು ಅಗತ್ಯವೆನಿಸಿದರಷ್ಟೇ ಡಿಜಿಪಿಗೆ ಶಿಫಾರಸು ಕಳುಹಿಸಿಕೊಡುವುದು. ಮೊಬೈಲ್ ವಿವರಗಳನ್ನು ಪಡೆದುಕೊಳ್ಳುವುದು ಅಗತ್ಯವಿಲ್ಲ ಎನಿಸಿದರೆ ತಮ್ಮ ಹಂತದಲ್ಲಿಯೇ ಮುಕ್ತಾಯಗೊಳಿಸಲು ನಿರ್ದೇಶಿಸಲಾಗಿದೆ.
ತನಿಖಾ ಸಂದರ್ಭದಲ್ಲಿ ಆರೋಪಿ ಹಾಗೂ ಸಂಶಯಾಸ್ಪದ ವ್ಯಕ್ತಿಯ ಮೊಬೈಲ್ ಮಾಹಿತಿಯು ತುರ್ತಾಗಿ ಬೇಕಾಗಿದ್ದಲ್ಲಿ ಸಿಡಿಆರ್ ಸೆಲ್ನ ಉಸ್ತುವಾರಿ ಅಧಿಕಾರಿ ಅಥವಾ ಸಿಬ್ಬಂದಿ ಮೊಬೈಲ್ ಸಂಖ್ಯೆಗೆ ತನಿಖಾಧಿಕಾರಿಯ ಸರ್ಕಾರಿ ಮೊಬೈಲ್ ಅಥವಾ ಸಂಬಂಧಪಟ್ಟ ವಿಭಾಗದ ಪೊಲೀಸ್ ಅಧೀಕ್ಷಕರ ಮೊಬೈಲ್ ಸಂಖ್ಯೆಯಿಂದ ಪ್ರಕರಣ ಸಂಖ್ಯೆಯೊಂದಿಗೆ ಎಸ್ಎಂಎಸ್ ಕಳುಹಿಸಿ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಪಡೆದು ಕೊಂಡ ನಂತರ ವಿವರ ಘಟಕದ ಅಧೀಕ್ಷಕರ ಗಮನಕ್ಕೆ ತರಬಹುದು.
ಸಿಐಡಿ ತನಿಖಾಧಿಕಾರಿಗಳು ತನಿಖಾ ಸಮಯದಲ್ಲಿ ಆರೋಪಿಯ ಅಥವಾ ಸಂಶಯಾಸ್ಪದ ವ್ಯಕ್ತಿಯ ಮೊಬೈಲ್ ವಿವರಗಳನ್ನು ಸರ್ವೀಸ್ ಪ್ರೊವೈಡರ್ಗಳಿಂದ ಪಡೆಯುವುದು ಮುಖ್ಯವೆಂದು ಮನಗಂಡಾಗ ಆ ವಿವರಗಳನ್ನು ಕೇಸ್ ಡೈರಿಯಲ್ಲಿ ಸ್ಪಷ್ಟವಾಗಿ ನಮೂದಿಸಬೇಕು ಎಂದು ಹೇಳಿದೆ.