ನ್ಯೂಸ್

ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಲು ಬೆಳಗ್ಗೆ 5ರಿಂದ ಸರತಿ ಸಾಲು!

ಮಂಡ್ಯ: ಖಾಸಗಿ ಶಾಲೆಗಳ ಎದುರು ರಾತ್ರಿಯಿಂದಲೂ ಮಕ್ಕಳ ದಾಖಲಾತಿಗಾಗಿ ಜನರ ಕ್ಯೂ ಇದೆ ಎಂದರೆ ಆಶ್ಚರ್ಯ ಆಗಲಾರದು. ಆದರೆ ಇಲ್ಲೊಂದು ಅಪರೂಪದ ಘಟನೆ ಪತ್ತೆಯಾಗಿದ್ದು ಈ ಸರ್ಕಾರಿ ಶಾಲೆಯಲ್ಲೇ ಮಕ್ಕಳನ್ನು ದಾಖಲಿಸಬೇಕು ಎಂದು ಪೋಷಕರು ಬೆಳಗ್ಗೆ 5 ಗಂಟೆಯಿಂದ ನಿಂತಿದ್ದಾರೆ!

ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಲು ಸರತಿ ಸಾಲು!

ಹೌದು, ಇದು ನಂಬಲು ಕಠಿಣವಾದರೂ ಸತ್ಯ! ಈ ಘಟನೆ ನಡೆದಿರುವುದು ಮಂಡ್ಯ ಜಿಲ್ಲೆಯ ಕೆ.ಆರ್​ ಪೇಟೆ ಸರ್ಕಾರಿ ಶಾಲೆಯಲ್ಲಿ. ಕೆ.ಆರ್.ಪೇಟೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ ಮುಂದೆ ಸರದಿ ಸಾಲಿನಲ್ಲಿ ಪೋಷಕರು ನಿಂತಿದ್ದು ಹೈ ಸ್ಕೂಲ್‌ಗೆ ಮಕ್ಕಳನ್ನು ಸೇರಿಸಲು ಬೆಳಗ್ಗೆಯಿಂದ‌ ಕಾದು ಕುಳಿತಿದ್ದಾರೆ.

ಇಲ್ಲಿ ಮೊದಲು ಬಂದವರಿಗೆ ಅವಕಾಶ!

ಎಸ್‌ಎಸ್‌ಎಲ್‌ಸಿಯಲ್ಲಿ‌ ಉತ್ತಮ ಫಲಿತಾಂಶವನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ನೀಡಿದ್ದು ಈ ಹಿನ್ನೆಲೆಯಲ್ಲಿ, 'ನಮ್ಮ ಮಕ್ಕಳೂ ಇದೇ ಶಾಲೆಯಲ್ಲಿ ಓದಿ ಒಳ್ಳೆಯವರಾಗಲಿ' ಎಂದು‌ ಪೋಷಕರು ಬೆಳಗ್ಗೆ 5 ಗಂಟೆಯಿಂದ ಟೋಕನ್‌ಗಾಗಿ ಕಾದು ಕುಳಿತಿದ್ದಾರೆ.

ಇತ್ತೀಚೆಗೆ ಬೇಡಿಕೆ ಹೆಚ್ಚಿರುವ ಕಾರಣ ಶಾಲೆ ಪ್ರವೇಶಕ್ಕೆ ಟೋಕನ್ ಪದ್ಧತಿ ಶುರುಮಾಡಲಾಗಿದೆ. ಮೊದಲು ಟೋಕನ್ ಪಡೆದವರಿಗೆ ಮೊದಲ ಆದ್ಯತೆ ನೀಡಲಾಗುತ್ತಿರುವ ಕಾರಣ ಬೆಳಗ್ಗೆಯಿಂದಲೇ ಶಾಲೆಯ ಮುಂದೆ ಕಾದು ಪೋಷಕರು ಕುಳಿತಿದ್ದಾರೆ.